ಜಿಲ್ಲೆ

ಸಾಹಿತ್ಯ ಸಮ್ಮೇಳನಗಳು ಕಲೆ, ಸಂಸ್ಕೃತಿ ಅನಾವರಣಗೊಳಿಸುತ್ತದೆ

ಹಾಸನ: ಸಾಹಿತ್ಯ ಸಮ್ಮೇಳನಗಳು ನಮ್ಮೊಳಗಿನ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸುವುದರ ಜತೆಗೆ ಕನ್ನಡ ನಾಡು, ನುಡಿ, ನೆಲ, ಜಲದ ಕುರಿತಾಗಿ ಸದಾ ಜಾಗೃತಿ ವಹಿಸಬೇಕು ಎನ್ನುವ ಎಚ್ಚರಿಕೆಯನ್ನು ಸಾರುತ್ತಿರುತ್ತವೆ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.


ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಕಲ್ಕೆರೆ ಕಟ್ಟೆಮನೆಯಲ್ಲಿ ಗುರುವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿದ ಅವರು, ಕನ್ನಡವನ್ನು ಕನ್ನಡಿಗರು ಎಂದೂ ಮರೆಯಬಾರದು. ಆ ನಿಟ್ಟಿನಲ್ಲಿ ಆಯಾ ಕಾಲಘಟ್ಟಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡಿನೆಲ್ಲೆಡೆ ನಡೆಯಬೇಕು ಎಂದರು.


ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಎಲ್ಲವನ್ನೂ ಮರೆತು ಹಣ ಗಳಿಸಿ, ಅದರಿಂದ ಮನರಂಜನೆಯನ್ನಷ್ಟೇ ಬಯಸುವ ಮನಸ್ಥಿತಿಗೆ ಬಂದಿದೆ. ಹಣ ಎಲ್ಲ ಸಂಬಂಧಗಳನ್ನು ನಾಶ ಮಾಡುತ್ತಿದೆ. ನಮ್ಮ ಬದುಕಿಗಾಗಿ ಅವಶ್ಯವಿರುವ ಹಣ ದುಡಿಯೋದು ತಪ್ಪಲ್ಲ. ಅಹಂಕಾರಕ್ಕಾಗಿ ಹಣ ಮಾಡೋದು ತಪ್ಪು ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಶ್ಲಾಘನೀಯ ಎಂದರು.


ಜಾನಪದ ವಿದ್ವಾಂಸ ಅಪ್ಪಗೆರೆ ತಿಮ್ಮರಾಜು ಮಾತನಾಡಿದರು. ಸಮ್ಮೇಳನಾಧ್ಯಕ್ಷ ಸಾಹಿತಿ ಎನ್.ಬೋರಲಿಂಗಯ್ಯ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ, ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಕಸಬಾ ಹೋಬಳಿ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ, ಮುಖಂಡರಾದ ಎನ್.ಗೋವಿಂದೇಗೌಡ, ಡಾ.ಸಂದೀಪ್, ಸದಾಶಿವ ಕುಲಾಲ್, ಗಾಯಕಿ ಬನುಮಾ ಗುರುದತ್ ಇತರರು ಇದ್ದರು.