ಜಿಲ್ಲೆ

ಪ್ರತಿಭಾನ್ವೇಷಣೆಗೆ ಸಾಹಿತ್ಯ ಸಂಭ್ರಮ ಪೂರಕ

ಶಿರಹಟ್ಟಿ: ಮಕ್ಕಳಲ್ಲಿ ಒಂದಿಲ್ಲೊಂದು ಕಲೆ ಅಡಗಿರುತ್ತದೆ. ಕಥೆ, ಕವನ, ನಾಟಕ ರಚನೆ ಹಾಗೂ ಗಾಯನ ಇತ್ಯಾದಿ ವಿಶಿಷ್ಟ ಪ್ರತಿಭೆ ಗುರುತಿಸಲು ಶಿಕ್ಷಣ ಇಲಾಖೆ ಹಮ್ಮಿಕೊಂಡ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಪೂರಕವಾಗಿದೆ ಎಂದು ತಾಪಂ ಇಒ ಡಾ. ಎನ್.ಎಚ್. ಓಲೇಕಾರ ಅಭಿಪ್ರಾಯಪಟ್ಟರು.

ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್ ಇಲಾಖೆ, ಜಿಪಂ, ತಾಪಂ, ಶಿಕ್ಷಣ ಇಲಾಖೆ ಹಾಗೂ ಮಾಗಡಿ ಗ್ರಾಪಂ ಸಹಯೋಗದಲ್ಲಿ ಗ್ರಾಮದ ಕೆಜಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ 3 ದಿನಗಳ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಜಗ್ಗತ್ತಿಗನುಗುಣವಾಗಿ ಮಕ್ಕಳನ್ನು ಸಿದ್ಧಪಡಿಸುವ ಹೊಣೆ ಶಿಕ್ಷಕರ ಮೇಲಿದೆ. ಹೀಗಾಗಿ ಕೇವಲ ಶಿಕ್ಷಣ ಕಲಿಕೆಗೆ ಅವರನ್ನು ಸೀಮಿತಗೊಳಿಸದೆ ಅವರಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ವೇದಿಕೆ ನಿರ್ಮಿಸಿಕೊಟ್ಟಾಗ ಅವರ ಪ್ರತಿಭೆ ಗುರುತಿಸಲು ಸಹಕಾರಿಯಾಗುತ್ತದೆ ಎಂದರು.

ಬಿಇಒ ಮಂಗಳಾ ತಾಪಸ್ಕರ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಆಗಾಧ ಪ್ರತಿಭೆ ಗುರುತಿಸಲಾಗದೇ ಅವರ ಆಶೋತ್ತರಗಳು ಕಮರಿಹೋಗುತ್ತವೆ, ಅಂಥವರನ್ನು ಬೆಳಕಿಗೆ ತರಲು ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಮೂಲಕ ಮಕ್ಕಳು ತಾವೇ ರಚಿಸಿದ ಕವನ ಕಥೆ, ನಾಟಕಾಭಿನಯ, ಗಾನ ರಚನೆ, ಪತ್ರಿಕಾ ವರದಿಗಾರಿಕೆ ಇತ್ಯಾದಿಗಳ್ನು ಅಭಿವ್ಯಕ್ತಗೊಳಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದಾಗ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಲಲಿತಾ ಪಾಟೀಲ, ಸದಸ್ಯ ವಿ.ಪಿ. ಮಠಪತಿ, ವೈ.ಡಿ. ಪಾಟೀಲ, ಶೈನಾಜ ಬುವಾಜಿ, ಗಿರಿಜವ್ವ ತಳವಾರ, ಶಿವರಾಜಗೌಡ ಪಾಟೀಲ, ಪಾಲಾಕ್ಷಪ್ಪ ಈಳಿಗೇರ, ಬಿ.ಎಸ್. ಹರ್ಲಾಪೂರ, ಎಸ್.ಎಫ್. ಮಠದ, ಎಂ.ಎ. ಬುಕೀಟಗಾರ, ಡಿ.ಎಚ್. ಪಾಟೀಲ, ಕೆ.ಪಿ. ಕಂಬಳಿ ಇತರರಿದ್ದರು. ಎನ್.ಎನ್. ಸಾವಿರಕುರಿ, ಎಂ.ಎನ್. ಭರಮಗೌಡರ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ 6 ರಿಂದ 9ನೇ ತರಗತಿಯ 100 ಮಕ್ಕಳು ಭಾಗವಹಿಸಿ ತಮ್ಮ ಕಲಾಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.