ಮಂಡ್ಯ: ಕೇಂದ್ರ ಹಾಗೂ ರಾಜ್ಯ ಕೇಂದ್ರವಲಯದ ಆಯೋಜಿತ ಸಾಕ್ಷರತಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಜತೆಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸೂಚನೆ ನೀಡಿದರು.
ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 2024-25ನೇ ಸಾಲಿನ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಕ್ರಿಯಾಯೋಜನೆ ಮತ್ತು 2023-24ನೇ ಸಾಲಿನ ಸಾಕ್ಷರತಾ ಪ್ರಮಾಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2024-25ನೇ ಸಾಲಿನ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಜಿಲ್ಲಾ ಹಂತದ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ ಸಿಇಒ, ಪ್ರತಿ ನಾಗರಿಕರೂ ಕೂಡ ಸಾಕ್ಷರತೆ ಸಾಧಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಅದರಂತೆ 15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ಗುರುತಿಸಿ ಸಾಕ್ಷರತೆ ಸಾಧಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
2023-24ನೇ ಸಾಲಿನ ಕಾರ್ಯಕ್ರಮದ ಸಮೀಕ್ಷಾ ದತ್ತಾಂಶವನ್ನು ಉಲ್ಲಾಸ್ ಆ್ಯಪ್‌ನಲ್ಲಿ ದಾಖಲೀಕರಣ ಮಾಡಿರುವ ಬಗ್ಗೆ ಪರಿಶೀಲಿಸಬೇಕು. ಅಂತೆಯೇ 500 ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮಗಳನ್ನಾಗಿಸುವ ಸಾಕ್ಷರತಾ ಕಾರ್ಯಕ್ರಮದ ಸಮೀಕ್ಷಾ ಕಾರ್ಯದ ಪ್ರಗತಿ ಮಳವಳ್ಳಿ ತಾಲೂಕು ಅತ್ಯಂತ ಕಡಿಮೆಯಿದ್ದು, ಕೂಡಲೇ ಕ್ರಮವಹಿಸಿ ಪ್ರಗತಿ ಸಾಧಿಸಬೇಕು ಎಂದರು.
ಸಭೆಯಲ್ಲಿ ಡಿಡಿಪಿಐ ಶಿವರಾಮೇಗೌಡ, ಜಿಲ್ಲಾ ಸಾಕ್ಷರತಾ ಅಧಿಕಾರಿ ರಾಮಲಿಂಗಯ್ಯ, ಡಯಟ್ ಪ್ರಾಂಶುಪಾಲ ಪುರುಷೋತ್ತಮ್ ಇತರರಿದ್ದರು.