ಪಾಂಡವಪುರ: ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಬುಧವಾರ ಅಕ್ಷರಾಭ್ಯಾಸ ನಡೆಸಲಾಯಿತು.
ಆದಿಚುಂಚನಗಿರಿ ಮಠದ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ. ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ಮಕ್ಕಳಿಗೆ ಜ್ಞಾನಾಂಕುರ ಅಕ್ಷರಾಭ್ಯಾಸ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸರಸ್ವತಿ, ಗಣಪತಿಗೆ ಪೂಜೆ ಸಲ್ಲಿಸಿ ಹೋಮ, ಹವನ ಹಾಗೂ ಅಭಿಷೇಕದೊಂದಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಪಾಲಕರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಜತೆಗೆ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಶಾಲೆಯ 102 ಮಕ್ಕಳ ಪಾಲಕರು ಭಾಗವಹಿಸಿದ್ದರು.
ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ನಮ್ಮ ಪೂರ್ವಿಕರು, ಹಿರಿಯರು ಶೃಂಗೇರಿ ಶಾರದಾ ಪೀಠದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಕೆಲಸ ಮಾಡುತ್ತಿದ್ದರು. ಶಾಲೆಯಲ್ಲಿ ಓದುವ ಬಡವರು, ರೈತರ ಮಕ್ಕಳು ಅಕ್ಷರಾಭ್ಯಾಸ ಮಾಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆದಿಚುಂಚನಗಿರಿ ಮಠದ ಶ್ರೀಗಳ ಆದೇಶದಂತೆ ನಮ್ಮ ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದೇವೆ ಎಂದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ, ನಾಗರಿಕತೆ, ನಮ್ಮ ಆಚಾರ-ವಿಚಾರಗಳನ್ನು ಸಹ ಕಲಿಸಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಬಿಜಿಎಸ್ ಮಠದ ಶಾಲೆಗಳು ಕೆಲಸ ಮಾಡುತ್ತಿವೆ. ಅಕ್ಷಾರಾಭ್ಯಾಸ ಕಾರ್ಯಕ್ರಮದಿಂದ ಪಾಲಕರು ಸಂತಸ ಪಡುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪರಿಸರ ದಿನಾಚರಣೆ ಅಂಗವಾಗಿ ಡಾ.ಬಾಲಗಂಗಾಧರನಾಥಸ್ವಾಮೀಜಿ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ, ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಈ ವೇಳೆ ಶಾಲೆಯ ಶಿಕ್ಷಕ ವರ್ಗ, ಸಿಬ್ಬಂದಿ ಇತರರು ಇದ್ದರು.