ಮುಂಡರಗಿ: ಶ್ರಾವಣ ಮಾಸದಲ್ಲಿ ಪ್ರವಚನ ಆಲಿಸುವುದರಿಂದ ಜೀವನ ಪಾವನವಾಗುತ್ತದೆ. ಈ ಮೂಲಕ ಮಹಾತ್ಮರ ಜೀವನ ಸಂದೇಶ ದರ್ಶನ ಪಡೆಯಬೇಕು. ಮಹಾತ್ಮರ ಜೀವನ ಚರಿತ್ರೆಯನ್ನು ಕೇಳುವುದರಿಂದ ಪುಣ್ಯ ಲಭಿಸುವುದರೊಂದಿಗೆ ಜೀವನ ಆದರ್ಶಮಯವಾಗಲು ಸಹಕಾರಿಯಾಗುತ್ತದೆ ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ‘12ನೇ ಶತಮಾನದ ಅಮರಗಣಾಧೀಶರ ಚರಿತ್ರೆ’ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪ್ರವಚನಕಾರ ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರಣರ ಚರಿತೆಯನ್ನು ಕೇಳುವುದರಿಂದ ಅಂಗವು ಲಿಂಗಮಯವಾಗುತ್ತದೆ. ಮಹಾತ್ಮರ ನೀತಿ ಕಥೆಗಳನ್ನು ನಿರಂತರವಾಗಿ ಆಲಿಸಬೇಕು. ಪುರಾಣ, ಪ್ರವಚನ ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಲಿಂಗನಾಯಕನಹಳ್ಳಿ ಶ್ರೀ ಚೆನ್ನವೀರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಶರಣರ ವಿಚಾರ ಚಿಂತನೆ ಜೀವನಕ್ಕೆ ಅತ್ಯಗತ್ಯ. ಶರಣರು, ಸಂತರು, ಮಹಾತ್ಮರ ಜೀವನ ಸಂದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ದಕ್ಷಿಣ ಭಾರತ ಮಹಿಳಾ ಸಾಧಕಿ ಪ್ರಶಸ್ತಿ ಪುರಸ್ಕೃತೆ ವೀಣಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ಶ್ರೇಯಾ ಜೋಶಿ ಭರತನಾಟ್ಯ ಪ್ರಸ್ತುತ ಪಡಿಸಿದರು. ಎಸ್.ಡಿ. ಪಾಟೀಲ ಮಾತನಾಡಿದರು. ವೀರಯ್ಯಸ್ವಾಮಿ ಕಾಗನೂರಮಠ, ಡಾ.ಎಸ್.ಬಿ. ಹಿರೇಮಠ, ಬಸವಂತಪ್ಪ ಹೊಸಮನಿ ಭಕ್ತಿಸೇವೆ ವಹಿಸಿಕೊಂಡಿದ್ದರು. ಪ್ರವಚನ ಕಮಿಟಿ ಅಧ್ಯಕ್ಷ ವಿ.ಜೆ. ಹಿರೇಮಠ, ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ಡಿ.ಡಿ. ಮೋರನಾಳ, ನಾಗೇಶ ಹುಬ್ಬಳ್ಳಿ, ಡಾ.ಬಿ.ಜೆ. ಜವಳಿ, ಬಸವರಾಜ ಗೋಡಿ, ದೇವಪ್ಪ ಇಟಗಿ, ಅನ್ನದಾನೀಶ ಅಕ್ಕೂರ, ವಿಶ್ವನಾಥ ಪಾಟೀಲ, ವೀರಭದ್ರಪ್ಪ ಮೇಟಿ, ನಾಗರಾಜ ಮುರಡಿ ಇತರರಿದ್ದರು.
ಸೋಮನಾಥ ಗವಾಯಿಗಳ, ಬಸವರಾಜ ಸಿದ್ದಣ್ಣವರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಆರ್. ರಿತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಇನಾಮತಿ ನಿರ್ವಹಿಸಿದರು.