ಉಡುಪಿ: ಕರೊನಾ ಲಾಕ್‌ಡೌನ್ ಕಾರಣದಿಂದ ಮದ್ಯದಂಗಡಿಗಳನ್ನು ಬಂದ್ ಮಾಡಿದ್ದರೂ ಕೆಲವೆಡೆ ಅಕ್ರಮ ಮದ್ಯ ಮಾರಾಟ ಆರೋಪವಿದ್ದು, ಅಬಕಾರಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬಾರ್, ವೈನ್, ಎಂಎಸ್‌ಐಎಲ್ ಮದ್ಯದಂಗಡಿಗಳ ಕ್ಲೋಸಿಂಗ್, ಓಪನಿಂಗ್ ಸ್ಟಾಕ್‌ಗಳನ್ನು ವ್ಯವಸ್ಥಿತ ಪರಿಶೀಲನೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಇಲಾಖೆ ಎಚ್ಚರಿಸಿದೆ.
ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಸ್ವಲ್ಪ ಪ್ರಮಾಣದಲ್ಲಿ ಹಿಡಿತದಲ್ಲಿದೆ. ಆದರೂ ಕೆಲವು ಕಡೆ ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದು ನಕಲಿ ಮದ್ಯವೊ, ಅಸಲಿಯೋ ಎಂಬುದೂ ತಿಳಿಯುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲವೆಡೆ ಅಕ್ರಮ ಮದ್ಯ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದು ಸಾರ್ವಜನಿಕ ಆರೋಪ. ಇದಕ್ಕೆ ಪೂರಕ ಎಂಬಂತೆ ಅಬಕಾರಿ ಇಲಾಖೆ 20ರಿಂದ 30ರಷ್ಟು ದೂರು ಕರೆಗಳನ್ನು ಸ್ವೀಕರಿಸಿ ಪರಿಶೀಲನೆ ನಡೆಸಿದೆ.
ವ್ಯವಸ್ಥಿತ ಸ್ಟಾಕ್ ಪರಿಶೀಲನೆ
ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್‌ಶಾಪ್, ಲಾಡ್ಜಿಂಗ್ ಅಟ್ಯಾಚ್ ಬಾರ್, ಪಬ್‌ಗಳು ಸಾಮಾನ್ಯವಾಗಿ ಕೆಲವು ಸಂದರ್ಭ ಬಂದ್ ಆಗಿದ್ದಲ್ಲಿ, ಬಂದ್ ಮಾಡುವಾಗ ಯಾವ ಮದ್ಯ ಎಷ್ಟೆಟ್ಟು ಸ್ಟಾಕ್ ಇತ್ತು ಹಾಗೂ ತೆರೆಯುವಾಗ ಎಷ್ಟು ಸ್ಟಾಕ್ ಇದ್ದವು ಎಂಬ ವಿವರವನ್ನು ಅಬಕಾರಿ ಇಲಾಖೆಗೆ ನೀಡಬೇಕು. ಸ್ಟಾಕ್, ಬ್ಯಾಲೆನ್ಸ್, ಮಾರಾಟದ ವಿವರವನ್ನು ಪ್ರತಿ ತಿಂಗಳು ಇಲಾಖೆಗೆ ದಾಖಲೆ ಸಮೇತ ನೀಡಬೇಕು. ಲಾಕ್‌ಡೌನ್ ದಿನಗಳನ್ನು ವಿಶೇಷವಾಗಿ ಪರಿಗಣಿಸಿರುವ ಅಬಕಾರಿ ಇಲಾಖೆ, ವ್ಯವಸ್ಥಿತ ಸ್ಟಾಕ್ ಪರಿಶೀಲನೆಗೆ ತಯಾರಿ ಮಾಡಿಕೊಂಡಿವೆ. ಇಲಾಖೆ ನೀಡಿದ ಲೆಡ್ಜರ್‌ನಲ್ಲಿ ಸ್ಟಾಕ್ ವಿವರ ನೀಡುವ ಮದ್ಯದಂಗಡಿಗಳಿಗೆ ಖುದ್ದು ಭೇಟಿ ನೀಡಿ ಮದ್ಯದ ಸ್ಟಾಕ್ ಪರಿಶೀಲಿಸುತ್ತಾರೆ. ಈಗಾಗಲೇ ಕೆಲವು ಕಡೆ ದೂರು ಬಂದ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯನ್ನು ಪಾರದರ್ಶಕ ರೀತಿಯಲ್ಲಿ ಬಿಗುವಾಗಿ ನಿರ್ವಹಿಸಲಾಗುವುದು. ಕ್ಲೋಸಿಂಗ್, ಓಪನಿಂಗ್ ಸ್ಟಾಕ್‌ನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಂತ ಮದ್ಯದಂಗಡಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಉಡುಪಿ ಜಿಲ್ಲೆ ಉಪ ಆಯುಕ್ತ ನಾಗೇಶ್ ಕುಮಾರ್ ತಿಳಿಸಿದ್ದಾರೆ.
12 ವಿಶೇಷ ಗಸ್ತು ತಂಡ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮತ್ತು ಅಕ್ರಮ ಕಳ್ಳಬಟ್ಟಿ ಸಾರಾಯಿ ತಯಾರಿ, ಮಾರಾಟ ಪತ್ತೆಗೆ ಜಿಲ್ಲೆಯಲ್ಲಿ ವಲಯವಾರು ತಲಾ 4 ವಿಶೇಷ ಗಸ್ತು ತಂಡಗಳನ್ನು ರಚಿಸಲಾಗಿದೆ. ಉಡುಪಿ-ಕಾಪು-ಬ್ರಹ್ಮಾವರ, ಕುಂದಾಪುರ-ಬೈಂದೂರು, ಕಾರ್ಕಳ-ಹೆಬ್ರಿ ಮೂರು ವಲಯಗಳಲ್ಲಿ 12 ತಂಡಗಳು ಗಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಯಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಂಡ ಮುಚ್ಚಿರುವ ಮದ್ಯದಂಗಡಿಗಳ ಫೋಟೊ ತೆಗೆದು ಉಪ ಆಯುಕ್ತರಿಗೆ ಕಳುಹಿಸುತ್ತಿರಬೇಕು. ಅಬಕಾರಿ ಅಕ್ರಮಗಳಿದ್ದಲ್ಲಿ ಉಡುಪಿ: 9964027232, ಕುಂದಾಪುರ : 8277088399, ಕುಂದಾಪುರ ಉಪವಿಭಾಗ: 7899019906, ಕಾರ್ಕಳ: 9481033662 ಸಂಪರ್ಕಿಸಲು ಅಧಿಕಾರಿಗಳು ಕೋರಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಅಬಕಾರಿ ಅಕ್ರಮ ನಡೆಯದಂತೆ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ಮದ್ಯದಂಗಡಿಗಳ ಕ್ಲೋಸಿಂಗ್, ಓಪನಿಂಗ್ ಸ್ಟಾಕ್ ವ್ಯವಸ್ಥಿತ ಪರಿಶೀಲನೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಇದ್ದಲ್ಲಿ ದೂರು ನೀಡಬೇಕು. ನಾಗೇಶ್ ಕುಮಾರ್, ಅಬಕಾರಿ ಇಲಾಖೆ, ಉಪ ಆಯುಕ್ತ ಉಡುಪಿ ಜಿಲ್ಲೆ