ಚಿಕ್ಕಬಳ್ಳಾಪುರ: ಮದ್ಯ ಸೇವನೆಯ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಸ್ನೇಹಿತನನ್ನೇ ಕೊಲೆ ಮಾಡಿದ್ದ ಇಬ್ಬರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಾರೋಬಂಡೆಯ ಎಲೆಕ್ಟ್ರಿಷಿಯನ್ ಮಾರುತೇಶ್(23) ಕೊಲೆಯಾದವ. ಶಿಡ್ಲಘಟ್ಟ ತಾಲೂಕಿನ ಕೆ.ಜಿ.ಪುರದ ಚಾಲಕ ಅಭಿಷೇಕ್(19), ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆಯ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ವಿನೋದ್‌ಗೌಡ (22) ಬಂಧಿತರು. ಮೃತನು ಹಾರೋಬಂಡೆಯ ಗ್ರಾಪಂ ಮಾಜಿ ಅಧ್ಯಕ್ಷರ ಪುತ್ರ.
ಏನಿದು ಪ್ರಕರಣ?
ಮಾರುತೇಶ್, ವಿನೋದ್ ಗೌಡ, ಅಭಿಷೇಕ್ ಮೂವರೂ ಸ್ನೇಹಿತರಾಗಿದ್ದು,ಜ.29ರಂದು ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಗೆ ಹೋಗಿದ್ದ ಮಾರುತೇಶ್ ನಾಪತ್ತೆಯಾಗಿದ್ದ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಈ ಮಧ್ಯೆ ಹಾರೋಬಂಡೆ ಸಮೀಪದ ಬಡಾವಣೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮಾರುತೇಶ್‌ನ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸೀಂ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಶರಣಪ್ಪ, ಅಮರ್ ಮೊಗಳೆ, ಸಿಬ್ಬಂದಿ ರವಿಕುಮಾರ್, ವಿಜಯ್ ಕುಮಾರ್, ಮುರಳಿ, ಪರಶುರಾಮ್, ರವೀಂದ್ರಕುಮಾರ್, ಮುನಿಕೃಷ್ಣರ ಅವರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ರಚಿಸಿದ್ದರು.
ಬಾರ್‌ನಲ್ಲಿ ಗಲಾಟೆ
ಈ ಹಿಂದೆ ಬಾರ್‌ನಲ್ಲಿ ಮದ್ಯ ಸೇವನೆಯ ಬಿಲ್ ಪಾವತಿಗೆ ಸಂಬಂಧಿಸಿದಂತೆ ಮಾರುತೇಶ್ ಗಲಾಟೆ ಮಾಡಿಕೊಂಡಿದ್ದ. ಹಣವನ್ನು ಹಲವು ಬಾರಿ ಕೇಳಿದರೂ ಕೊಟ್ಟಿರಲಿಲ್ಲ. ಇದರ ನಡುವೆ ಮಾರುತೇಶ್, ಆರೋಪಿಗಳಾದ ವಿನೋದ್ ಗೌಡ, ಅಭಿಷೇಕ್ ಸೇರಿ ಮೂವರೂ ಗ್ರಾಮದ ಬಡಾವಣೆಯಲ್ಲಿ ಮದ್ಯ ಸೇವಿಸಿದ್ದು, ಹಳೇಬಿಲ್ ಪಾವತಿ ಸಂಬಂಧಿಸದಂತೆ ಚರ್ಚೆಯಾಗಿದೆ. ಚರ್ಚೆ ವಿಕೋಪಕ್ಕೆ ತೆರಳಿ, ಇದರಿಂದ ಆಕ್ರೋಶಗೊಂಡ ಅಭಿಷೇಕ್ ಹಾಗೂ ವಿನೋದಗೌಡ ಇಬ್ಬರು ಮಾರುತೇಶ್‌ಗೆ ಬಿಯರ್ ಬಾಟಲ್ನಿಂದ ತಲೆಗೆ ಹೊಡೆದಿದ್ದು, ಚೂಪಾದ ಗಾಜಿನಿಂದ ಚುಚ್ಚಿ ಕೊಲೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದಿದೆ.