ಜಿಲ್ಲೆ

ದೇವರಿಗೆ ಮದ್ಯದ ಅಭಿಷೇಕ!

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಕಾರವಾರ
ಮದ್ಯದ ಅಭಿಷೇಕ, ಕೋಳಿ ಮಾಂಸದ ನೈವೇದ್ಯ, ಸಿಗರೇಟಿನ ಆರತಿ ಮಾಡುವ ಅಪರೂಪದ ಕೋಡಿಬಾಗದ ಖಾಪ್ರಿ ಜಾತ್ರೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ದೇವರಿಗೆ ಮದ್ಯದ ಅಭಿಷೇಕ ಮಾಡಿ ನಂತರ ಅಲಂಕಾರ ಮಾಡಲಾಯಿತು. ಮಧ್ಯಾಹ್ನ 12 ಗಂಟೆಯ ನಂತರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಾವಿರಾರು ಭಕ್ತಾದಿಗಳು ಸರದಿಯಲ್ಲಿ ನಿಂತು ದೇವರಿಗೆ ಗೋವಾ ಮದ್ಯ ತಂದು ಅರ್ಪಿಸಿದರು. ಕೆಲವರು ಸಿಗರೇಟಿನ ಪ್ಯಾಕ್‌ಗಳನ್ನೂ ಹಿಡಿದು ತಂದಿದ್ದರು. ಕೋಳಿಗಳನ್ನು ತಂದು ಬಲಿ ಕೊಟ್ಟು ಮನೆಗೆ ಕೊಂಡೊಯ್ದರು. ದೇವಸ್ಥಾನದ ಎದುರು ಮೆಣದ ಬತ್ತಿಗಳನ್ನು ಹಚ್ಚಿಟ್ಟರು. ತೆಂಗಿನಕಾಯಿ, ಬಾಳೆಹಣ್ಣು, ಮುಂತಾದ ವಸ್ತುಗಳಿಂದ ತುಲಾಭಾರದ ಹರಕೆ ಒಪ್ಪಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ರಾತ್ರಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.
ಏನಿದರ ಹಿನ್ನೆಲೆ..?
ಸಾಮಾನ್ಯವಾಗಿ ದೇವಸ್ಥಾನಕ್ಕೆ ಎಂದಾಕ್ಷಣ ಹಣ್ಣು, ಕಾಯಿ, ಅರಿಶಿನ ಕುಂಕುಮ, ಹೂವು, ಬಾಳೆಹಣ್ಣು, ಹಾಲು ಎಳನೀರು ಮುಂತಾದ ವಸ್ತುಗಳನ್ನು ಕೊಂಡೊಯ್ಯುವುದು ವಾಡಿಕೆ. ಆದರೆ, ಇಲ್ಲಿ ಯಾವುದು ನಿಷಿದ್ಧ ಎಂದು ದೂರ ಇಡುತ್ತಾರೋ ಅವುಗಳನ್ನೇ ಮಾರ್ಚ್ ತಿಂಗಳಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ  ದೇವರಿಗೆ ಅರ್ಪಿಸುವ ವಿಶಿಷ್ಟ ಸಂಪ್ರದಾಯವಿದೆ. ಕೋಡಿಬಾಗದ ಸುತ್ತಲಿನ ಭಕ್ತರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.
ಶತಮಾನಗಳ ಹಿಂದೆ ಖಾಪ್ರಿ ಎಂಬ ಹೆಸರಿನ ನಿಗ್ರೊವೊಬ್ಬ ಕಾರವಾರದ ಕಾಳಿ ದಂಡೆಯ ಮೇಲೆ ವಾಸ್ತವ್ಯ ಮಾಡುತ್ತಿದ್ದ. ಆತನಿಗೆ ಮದ್ಯ, ಸಿಗರೇಟು, ಕೋಳಿ ಮಾಂಸ ಅತಿ ಪ್ರಿಯವಾಗಿತ್ತು. ಆತ ಅತೀ ಹೆಚ್ಚು ಜನಾನುರಾಗಿಯಾಗಿದ್ದ. ಬಡವರಿಗೆ ಸಹಾಯ ಮಾಡುತ್ತಿದ್ದ. ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದ. ಇದರಿಂದ ಆತನ ಬಗ್ಗೆ ಜನ ಅತೀ ಪ್ರೀತಿ ಹೊಂದಿದ್ದರು. ಆತ ಮೃತಪಟ್ಟ ನಂತರ ಹಲವು ಪವಾಡಗಳು ನಡೆದವು. ಆತನ ಪವಾಡಗಳಿಂದ ಚಕಿತರಾದ ಸುತ್ತಲಿನ ಜನ ಆತನನ್ನು ದೇವರು ಎಂದು ಪೂಜೆ ಮಾಡಲಾರಂಭಿಸಿದರು. ದೇವಸ್ಥಾನ ಕಟ್ಟಿದರು. ಎಂದು ದೇವಸ್ಥಾನದ ಅರ್ಚಕರ ಕುಟುಂಬದಲ್ಲಿ ಒಬ್ಬರಾದ ವಿನಾಯಕ ನಾಯ್ಕ ತಿಳಿಸುತ್ತಾರೆ. ಜನಾನುರಾಗಿ ಖಾಪ್ರಿಗಾಗಿ ಪ್ರತಿ ವರ್ಷ ಜಾತ್ರೆ ಮಾಡಲಾಗುತ್ತದೆ. ಆತನಿಗೆ ಇಷ್ಟವಾಗಿದ್ದ ವಸ್ತುಗಳನ್ನು ಅರ್ಪಿಸಿ ಜನ ಪ್ರೀತಿ, ಗೌರವ ಸಮರ್ಪಿಸುತ್ತಾರೆ. ಆತನಿಗೆ ಭಕ್ತಿಯಿಂದ ನಡೆದುಕೊಂಡವರ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಅವರ ಅಭಿಪ್ರಾಯ.