ಸಿಂಧನೂರು: ಲಯನ್ಸ್ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಗಳು ಅನುಷ್ಠಾನಗೊಂಡು ಸಮಾಜಕ್ಕೆ ಉಪಯೋಗ ಆಗಬೇಕೆಂದು ನಿವೃತ್ತ ಪ್ರಾಧ್ಯಾಪಕ ಎಸ್.ಎಚ್.ಕಬ್ಬಿನಕಂತಿಮಠ ಹೇಳಿದರು.
ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ 2023-24 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿ ಭಾನುವಾರ ಸಂಜೆ ಮಾತನಾಡಿದರು. ಪರಿಸರ ಸಂರಕ್ಷಣೆ, ಸ್ವಚ್ಛತೆ, ಬಹುವಿಶೇಷತೆಯ ಆಸ್ಪತ್ರೆ ಮತ್ತು ಸೂಕ್ಷ್ಮ ಕೌಶಲಗಳಿಗೆ ಮಹತ್ವ ನೀಡುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಆಗ ಸಂಸ್ಥೆಗಳ ಸಮಾಜ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಇದನ್ನೂ ಓದಿ: ಬಡ ಮಕ್ಕಳು-ವೃದ್ಧರ ಮೊಗದಲ್ಲಿ ನಗು ಮೂಡಿಸಿತು ರಿಲಯನ್ಸ್ ಫೌಂಡೇಷನ್ನ ‘ದಿ ಸೌಂಡ್ ಆಫ್ ಮ್ಯೂಸಿಕ್’ ವಿಶೇಷ ಪ್ರದರ್ಶನ
ಸೇವಾ ಕಾರ್ಯ ಮಾಡುವುದರಿಂದ ಸಿಗುವ ಸಂತೋಷ, ಆತ್ಮತೃಪ್ತಿ ಮತ್ತೊಂದಿಲ್ಲ. ಸಿಂಧನೂರು ಲಯನ್ಸ್ ಕ್ಲಬ್ ಅತ್ಯುತ್ತಮ ಕಾರ್ಯ ಮಾಡುತ್ತಿರುವ ಬಗ್ಗೆ ಹೆಮ್ಮೆ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಯೋಜನೆ ಹಾಕಿಕೊಂಡು ಜನರ ವಿಶ್ವಾಸ ಗಳಿಸಲಿ ಎಂದು ಎಸ್.ಎಚ್.ಕಬ್ಬಿನಕಂತಿಮಠ ತಿಳಿಸಿದರು.
ಡಾ.ಕೆ.ಶಿವರಾಜ ಮಾತನಾಡಿ, ಲಯನ್ಸ್ ಕ್ಲಬ್ ನಿಸ್ವಾರ್ಥ ಹಾಗೂ ಸಮಾಜಮುಖಿ ಸಂಸ್ಥೆಯಾಗಿದೆ. ಕಾರ್ಯಕಾರಿ ಸಮಿತಿಯಿಂದ ಉತ್ತಮ ಕಾರ್ಯ ನಡೆಯಲಿವೆ ಎಂದರು. ತೆರಿಗೆ ಅಧಿಕಾರಿ ವಿಶ್ವನಾಥ ಅಂಗಡಿ ಮಾತನಾಡಿ, ಲಯನ್ಸ್ ಕ್ಲಬ್ ಕಾರ್ಯಗಳು ಶ್ಲಾಘನೀಯವಾಗಿವೆ. ಯಾವುದೇ ಫಲಾಪೇಕ್ಷಗಳಿಲ್ಲದೆ, ದಾನಿಗಳ ಸಹಕಾರದೊಂದಿಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ಕಾರ್ಯದರ್ಶಿ ಶಿವರಾಮಕೃಷ್ಣನ್ ವಾರ್ಷಿಕ ವರದಿ ವಾಚಿಸಿದರು.
ಅಧ್ಯಕ್ಷರಾಗಿ ಕೆ.ರಾಜಶೇಖರ, ಉಪಾಧ್ಯಕ್ಷರಾಗಿ ಜಿ.ರವೀಂದ್ರ, ವೆಂಕಟೇಶ ಗುಡಪಾಟಿ, ಪಿ.ಶಿವರಾಮಕೃಷ್ಣನ್, ಕಾರ್ಯದರ್ಶಿಯಾಗಿ ಡಿವಿಬಿ ರಂಗರಾಜು, ಸಹಕಾರ್ಯದರ್ಶಿಯಾಗಿ ಪಿ.ಸುರೇಶ, ಖಜಾಂಚಿಯಾಗಿ ಪಿ.ಪ್ರವೀಣಕುಮಾರ, ಮಾರ್ಗದರ್ಶಕರಾಗಿ ಜಿ.ರವಿಕುಮಾರ, ಜಿ.ರಾಮಕೃಷ್ಣನ್ ಪದಗ್ರಹಣ ಮಾಡಿದರು. ನಿಕಟಪೂರ್ವ ಪದಾಧಿಕಾರಿಗಳಾದ ಎನ್.ಶಿವ, ವೀರೇಶ ತಾಳೂರು, ಮಲ್ಲಿಕಾರ್ಜುನ ಇತ್ಲಿ, ಗವಿಸಿದ್ದಪ್ಪ ಇದ್ದರು.