ಹಿರೇಕೆರೂರ: ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕೆಲವು ಸಮಯವನ್ನು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡಬೇಕು. ಅಂದಾಗ ಮಾತ್ರ ಜೀವನ ಪರಿಪೂರ್ಣವಾಗುತ್ತದೆ ಎಂದು ಸ್ಥಾಪನಾ ಅಧಿಕಾರಿ, ಎಂಜೆಎಫ್, ಲಯನ್ ಎಸ್.ಎಚ್. ಕಬ್ಬಿಣಕಂತಿಮಠ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಹಿರೇಕೆರೂರ ಪರಿವಾರದ 3ನೇ ಸಂಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಹಳ ವರ್ಷಗಳ ಇತಿಹಾಸ ಹೊಂದಿರುವ ಲಯನ್ಸ್ ಕ್ಲಬ್, ಸಾಮಾಜಿಕ ಕಾರ್ಯಗಳಲ್ಲಿ ತನ್ನ ಸೇವೆ ಸಲ್ಲಿಸುತ್ತ ಬಂದಿದ್ದು, ಸಾರ್ವಜನಿಕರಿಗೆ ಆರೋಗ್ಯ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ರಕ್ತದಾನ ಶಿಬಿರ ಹೀಗೆ ಹಲವು ಕ್ಷೇತ್ರಗಳಲ್ಲಿ ಅತ್ಯಂತ ಮಹತ್ವವುಳ್ಳ ಕಾರ್ಯಗಳನ್ನು ಮಾಡುತ್ತಿದೆ. ಹಿಂದಿನ ಅಧ್ಯಕ್ಷರು ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದು, ಲಯನ್ಸ್ ಕ್ಲಬ್ ಹಿರೇಕೆರೂರ ಪರಿವಾರಕ್ಕೆ ಹೊಸ ಚೈತನ್ಯ ತುಂಬಿದ್ದಾರೆ. ಮುಂದಿನ ಅಧ್ಯಕ್ಷರು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲಿ ಎಂದರು.
ನೂತನ ಅಧ್ಯಕ್ಷ ಡಾ. ನಿರಂಜನ ಮಾನಿಬಣಕಾರ ಮಾತನಾಡಿ, ನನಗೆ ದೊರೆತ ಈ ಅಧಿಕಾರ ಅವಧಿಯಲ್ಲಿ ಎಲ್ಲ ಪದಾಧಿಕಾರಿಗಳ ಮಾರ್ಗದರ್ಶನದೊಂದಿಗೆ ಸಾರ್ವಜನಿಕರಿಗೆ ಅತ್ಯಂತ ಹತ್ತಿರವಾಗುವ ನಿಟ್ಟಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತೇನೆ ಎಂದರು.
ಬಳಿಕ ನೂತನ ಅಧ್ಯಕ್ಷ ಡಾ. ನಿರಂಜನ ಮಾನಿಬಣಕಾರ, ಉಪಾಧ್ಯಕ್ಷ ಶಂಭುಲಿಂಗ ತಂಬಾಕದ, ಕಾರ್ಯದರ್ಶಿ ಡಾ. ಮನು ಮಾಗನೂರ, ಖಜಾಂಚಿ ಮಂಜುನಾಥ ಕಳ್ಳಿಹಾಳ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಡಾ. ಸುನಿತಾ ಮಾನಿಬಣಕಾರ, ಗಾಯಿತ್ರಿ ತಂಬಾಕದ, ಕೋಮಲ್ ಮಾಗನೂರ, ಲತಾ ಗೌಡರ, ಪಾರ್ವತಿ ಕಳ್ಳಿಹಾಳ, ಗೀತಾವಾಣಿ ಸಂಗನಗೌಡ್ರ, ಸುಶೀಲಾ ಜೋಗಿಹಳ್ಳಿ, ದೀಪಿಕಾ ಕಲಾಲ, ವರ್ಷಾ ಕಲಾಲ, ವೀಣಾ ಉಪ್ಪಾರ, ರೇಖಾ ಸಿದ್ದಪ್ಪಗೌಡ್ರ, ಲಕ್ಷ್ಮೀ ವೈಶ್ಯರ, ರೂಪಾ ಹೆಡಿಯಾಲ, ಸುರೇಶ ವೈಶ್ಯರ, ಹರಿಶ ಕಲಾಲ, ಜಗದೀಶ ಹೆಡಿಯಾಲ, ಪ್ರಕಾಶ ಶಿರಗಂಬಿ ಇದ್ದರು.