ಮಡಿಕೇರಿ:
ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ನಗರದಾದ್ಯಂತ ನೆಲದಾಳದ ವಿದ್ಯುತ್ ಕೇಬಲ್ ಅಳವಡಿಕೆಗೆ ಚಿಂತನೆ ಹರಿಸಲಾಗಿದೆ ಎಂದು ಶಾಸಕ ಡಾ. ಮಂಥರ್ ಗೌಡ ಹೇಳಿದ್ದಾರೆ. ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಮಡಿಕೇರಿ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ಎಂ.ಎನ್. ತನ್ಮಯಿ ಮತ್ತು ಪವರ್‌ಮೆನ್‌ಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕದ ಆದ್ಯತೆಯಾಗಿ ನಗರದಾದ್ಯಂತ ವಿದ್ಯುತ್ ಕೇಬಲ್ ಅನ್ನು ಅಂಡರ್ ಗ್ರೌಂಡ್ ಮೂಲಕ ಅಳವಡಿಸುವ ಚಿಂತನೆಯಿದೆ. ರಾಜ್ಯ ವಿದ್ಯುತ್ ಇಲಾಖೆಯ ಸಚಿವರಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಮಡಿಕೇರಿಯಲ್ಲಿ ವರ್ಷದ 5-6 ತಿಂಗಳೂ ಮಳೆ ಬೀಳುವ ಹಿನ್ನೆಲೆಯಲ್ಲಿ ಮೂಲಸೌಲಭ್ಯಕ್ಕೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಮೂಲಸೌಲಭ್ಯಕ್ಕೆ ಗಮನ ನೀಡಲಾಗುತ್ತದೆ.
ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿಯೂ ಕಾಲು ಹಾದಿ ನಿರ್ಮಾಣದ ಯೋಜನೆ ಇನ್ನೇನು ಜಾರಿಯಾಗಲಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಸಂಬAಧಿ ಚಿಕಿತ್ಸಾ ಘಟಕ ಪ್ರಾರಂಭಿಸಿ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಮುಂದಾಗುತ್ತೇವೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ, ಜನಪ್ರತಿನಿಧಿಗಳ ಪ್ರಯತ್ನದೊಂದಿಗೆ ಸರ್ವ ಜನತೆಯ ಸಹಕಾರ ಕೂಡ ಅಗತ್ಯವಾಗಿದೆ. ಸ್ಟೋನ್ ಹಿಲ್‌ನಲ್ಲಿ 5 ಕೋಟಿ ರೂ. ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕ ಮಳೆಗಾಲದ ನಂತರ ಬಳಕಗೆ ಲಭಿಸಲಿದೆ. ಕ್ರೀಡಾಪಟುಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸೆಮಿ ಒಳಾಂಗಣ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಮಾಡಲಾಗುತ್ತದೆ. ಮಡಿಕೇರಿಯನ್ನು ಭವಿಷ್ಯದ ಪೀಳಿಗೆಗೆ ಸುಂದರವಾಗಿಸುವ ಪಣವನ್ನು ಎಲ್ಲರೂ ತೊಡಬೇಕಾಗಿದೆ.
ಭೂಕುಸಿತಕ್ಕೆ ಸಂಬAಧಿಸಿದAತೆ ಸೋಮವಾರ ವಿಧಾನಸಭೆಯಲ್ಲಿ ಚರ್ಚಿಸಲಿದ್ದು, ಮಳೆಗಾಲದಲ್ಲಿ ಸಂಭವಿಸುವ ಅನಾಹುತಗಳ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ವಸತಿ ಮತ್ತು ಭೂರಹಿತರ ಸಮಸ್ಯೆಗೂ ಸ್ಪಂದಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸುವುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎನ್. ತನ್ಮಯಿ, ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ, 622 ಅಂಕಗಳಿಸಿದ್ದ ತನ್ನ ಸಹೋದರನ ಸ್ಫೂರ್ತಿಯೇ ತನ್ನನ್ನೂ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಬರುವಂಥ ಸಾಧನೆ ಮಾಡಲು ಕಾರಣವಾಯಿತು. ಯುವಜನಾಂಗ ಈ ದೇಶದ ನಿಜವಾದ ಶಕ್ತಿ ಎಂಬ ಸ್ವಾಮಿ ವಿವೇಕಾನಂದರ ನುಡಿಗಳನ್ನೇ ತಾನು ಸ್ಫೂರ್ತಿಯಾಗಿಸಿಕೊಂಡೆ ಎಂದರು.
ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮದನ್ ಮಾದಯ್ಯ, ಕಾರ್ಯದರ್ಶಿ ಕೆ. ಮಧುಕರ್, ವಲಯಾಧ್ಯಕ್ಷ ಕೆ. ಎಸ್. ನಟರಾಜ್, ಖಜಾಂಜಿ ಕೆ. ದಾಮೋದರ್ ವೇದಿಕೆಯಲ್ಲಿದ್ದರು.
ಅಂಬೆಕಲ್ ನವೀನ್ ಕುಶಾಲಪ್ಪ, ಎಂ.ಎ. ನಿರಂಜನ್, ಪ್ರತಿಮಾ ರವಿ, ಡಿ.ಜೆ. ಕಿಶೋರ್, ಪ್ರಿಯಾ ನವೀನ್, ಕನ್ನಂಡ ಕವಿತಾ,
ಮೋಹನ್ ಕುಮಾರ್, ಸತೀಶ್ ರಾಜ್, ರಾಗ, ಪ್ರಕೃತಿ, ಪ್ರೇಮಾ ಕೋಟಿ ಇದ್ದರು.
ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳ ನಡುವೇ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿಯ ಪವರ್‌ಮನ್‌ಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಪವರ್‌ಮನ್‌ಗಳಾದ ಶಿವಣ್ಣ, ರತ್ನಯ್ಯ, ಮಂಜುನಾಥ್, ತಿಮ್ಮೇಗೌಡ, ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಪವರ್ ಮನ್ ರತ್ನಯ್ಯ, ಜನತೆಗೆ ವ್ಯತ್ಯಯವಾಗದಂತೆ ವಿದ್ಯುತ್ ಸಂಪರ್ಕ ನೀಡುವುದೇ ಪರವ್‌ಮನ್ ಗಳಾಗಿ ನಮ್ಮ ಕರ್ತವ್ಯವಾಗಿದೆ. ಕೃತಜ್ಞತೆರಹಿತ ಈ ವೃತ್ತಿಯಲ್ಲಿ ನಮ್ಮ ಮನಸ್ಸಿನ ಸಮಧಾನಕ್ಕೆ ತಕ್ಕಂತೆ ಹಗಲಿರುಳೂ ಕಾರ್ಯನಿರ್ವಹಿಸುತ್ತಿದ್ದೇವೆ. ಈ ವೃತ್ತಿಯಲ್ಲಿ ಜನರ ಹೊಗಳಿಕೆ, ತೆಗಳಿಕೆ, ಟೀಕೆಗಳನ್ನೂ ಸಮಾನಾಗಿ ಸ್ವೀಕರಿಸಿದ್ದೇವೆ ಎಂದು ಹೇಳಿದರು.
ಸನ್ಮಾನ ನೆರವೇರಿಸಿ ಮಾತನಾಡಿದ ಶಾಸಕ ಡಾ.ಮಂಥರ್ ಗೌಡ, ಪವರ್‌ಮನ್ ಗಳ ಕೆಲಸ ನಿಜಕ್ಕೂ ಕಠಿಣವಾಗಿದ್ದು, ಊಹೆಗೂ ನಿಲುಕದಂಥ ಕಠಿಣ ಸವಾಲುಗಳನ್ನು ಸ್ವೀಕರಿಸಿ ಕೊಡಗಿನಾದ್ಯಂತ ಪವರ್ ಮನ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸಕ್ಕೆ ತಕ್ಕಂತೆ ಕೃತಜ್ಞತೆ ನಿರೀಕ್ಷಿಸದ ಈ ವೃತ್ತಿಯಲ್ಲಿ ಸಕ್ರಿಯರಾಗಿರುವ ಪವರ್‌ಮನ್ ಗಳಿಗೆ ಕೊಡಗಿನ ಜನತೆ ಸದಾ ಅಬಾರಿಯಾಗಿರಬೇಕೆಂದರು.
ಮೂಡ ಅಧ್ಯಕ್ಷ ಬಿ.ವೈ. ರಾಜೇಶ್, ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್, ಜಾಣಪದ ಪರಿಷತ್ತು ತಾಲೂಕು ಅಧ್ಯಕ್ಷ ಹೆಚ್.ಟಿ. ಅನಿಲ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಇದ್ದರು.