- ಅವಿನ್ ಶೆಟ್ಟಿ ಉಡುಪಿ
ಕೋತಿಗಳ ಜಾತಿಯಲ್ಲಿಯೇ ಅತ್ಯಂತ ಶಿಸ್ತುಬದ್ಧ ಜೀವನಕ್ರಮ ಇರುವ ಸಿಂಗಳೀಕ (Lion-tailed macaque) ಪರಿಸ್ಥಿತಿ ಪ್ರಸ್ತುತ ಶೋಚನೀಯವಾಗಿದೆ. ಮನುಷ್ಯರಿಂದ ದೂರ ಇರಬೇಕಾದ, ನೆಲಕ್ಕಿಳಿಯದೆ, ಎತ್ತರದ ಮರಗಳ ಮೇಲೆ ಸ್ವಚ್ಛಂದವಾಗಿ ಜಿಗಿಯುತ್ತ ಇರಬೇಕಾದ ಸಿಂಗಳೀಕ ಆಗುಂಬೆ ಘಾಟಿಯಲ್ಲಿ ನೆಲದ ಮೇಲೆ ಕೂತು ಅವರಿವರ ಬಳಿ ತಿಂಡಿ, ತಿನಿಸಿಗಾಗಿ ಕೈಚಾಚುತ್ತಿವೆ.
ವನ್ಯಜೀವಿಗಳ ಮೇಲೆ ನಗರೀಕರಣ ಪ್ರಭಾವ ಬೀರಿದ ರೀತಿಯಿದು. ಪ್ರಪಂಚದಲ್ಲಿ ಎಲ್ಲೂ ಕಾಣಸಿಗದ ಸಿಂಗಳೀಕ ವಿಶೇಷ ಜಾತಿಯ ಮಂಗ ಇರುವುದು ಭಾರತದ ಮಧ್ಯ ಪಶ್ಚಿಮಘಟ್ಟದಲ್ಲಿ ಮಾತ್ರ. ಕರ್ನಾಟಕ, ತಮಿಳುನಾಡು, ಕೇರಳದ ಪಶ್ಚಿಮಘಟ್ಟ ಪರಿಸರ ಇವುಗಳ ಆವಾಸ ಸ್ಥಾನ. ಇವುಗಳು ಗುಂಪುಗುಂಪಾಗಿ ವಾಸಿಸುತ್ತವೆ. ಪರಿಸರ ತಜ್ಞರು, ಅರಣ್ಯ ಇಲಾಖೆ ಇತ್ತೀಚಿನ ಅಧ್ಯಯನ ಪ್ರಕಾರ 3000-3500 ಸಿಂಗಳೀಕಗಳಿವೆ.
ತಿನಿಸಿಗೆ ಕಾಯುವ ಸಿಂಗಳೀಕ: ಆಗುಂಬೆಯಲ್ಲಿ ಸಿಂಗಳೀಕಗಳು ಕಾಡುತ್ಪತ್ತಿ, ಗೆಡ್ಡೆ, ಹಣ್ಣುಗಳನ್ನು ಬಿಟ್ಟು ಪ್ರವಾಸಿಗರು ಕೊಡುವ ಬಿಸ್ಕೆಟ್, ಲೇಸ್, ಕುರ್‌ಕುರೆ, ಚಕ್ಕುಲಿ, ಮಸಾಲ ಮಂಡಕ್ಕಿ, ಚಿಪ್ಸ್, ಮನೆಯಿಂದ ತಂದು ಊಟ ಮಾಡಿದ ಆಹಾರ ಪದಾರ್ಥಗಳಿಗೆ ಹಾತೊರೆಯುತ್ತಿವೆ. ಸುಲಭವಾಗಿ ಸಿಗುವ ಈ ಆಹಾರಗಳು ಅಳಿವಂಚಿನಲ್ಲಿರುವ ಸಿಂಗಳೀಕಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಶಿವಮೊಗ್ಗದ ಪರಿಸರ ಆಸಕ್ತ ಡಾ.ಶೇಖರ್ ಗೌಳೆರ್.
ಸಿಂಗಳೀಕಗಳಿಗೆ ಯಾರೂ ಆಹಾರ ನೀಡದಂತೆ ಅರಣ್ಯ ಇಲಾಖೆ ಹೇಳುತ್ತಿದ್ದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ರಸ್ತೆಯಲ್ಲಿ ಹೋಗುವವರು ಆಹಾರ ನೀಡಿ ಖುಷಿಪಡುತ್ತಾರೆ. ಇದರಿಂದ ಸಿಂಗಳೀಕಗಳು ವಾಹನಗಳ ಅಡಿಗೆ ಬಿದ್ದು ಸಾಯುವುದೂ ಇದೆ. ಕೃತಕ ಆಹಾರದಿಂದ ಅವುಗಳ ಆರೋಗ್ಯಕ್ಕೂ ತೊಂದರೆಯಾಗಬಹುದು ಎನ್ನುವುದು ಪರಿಸರ ತಜ್ಞರ ಆತಂಕ.
ಆಗುಂಬೆ ರಸ್ತೆ ಅಗಲೀಕರಣಕ್ಕೆ ತಡೆ: ಹಿಂದೆ ಎರಡು ಬಾರಿ ಆಗುಂಬೆ ಘಾಟ್ (ಎನ್‌ಎಚ್ 169ಎ) ಅಗಲೀಕರಣ ಪ್ರಸ್ತಾಪ ಬಂದಾಗ ಸಿಂಗಳೀಕ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ರಸ್ತೆ ವಿಸ್ತರಣೆಗೆ ಎತ್ತರದ ಮರಗಳನ್ನು ತೆರವು ಮಾಡಬೇಕಾಗುತ್ತದೆ. ಇದರಿಂದ ಸಿಂಗಳೀಕಗಳಿಗೆ ಮರದಿಂದ ಮರಕ್ಕೆ ಹಾರಲು ಸಮಸ್ಯೆಯಾಗುತ್ತದೆ. ಅಪಘಾತದಲ್ಲಿ ಮೃತಪಡುವ ಸಾಧ್ಯತೆಯೂ ಹೆಚ್ಚು ಎಂದು ಯೋಜನೆಯನ್ನು ಅರಣ್ಯ ಇಲಾಖೆ ವಿರೋಧಿಸಿದ್ದಕ್ಕೆ ಮಣಿದ ಹೆದ್ದಾರಿ ಸಚಿವಾಲಯ ಪ್ರಸ್ತಾಪವನ್ನು ಕೈಬಿಟ್ಟಿತ್ತು.
ಹುಲಿಯಷ್ಟೇ ಆದ್ಯತೆ: ಸಿಂಗಳೀಕ ಸಹಿತ ಜಗತ್ತಿನಲ್ಲಿ 25 ವಿಶೇಷ ಸಂತತಿ ಮಂಗಗಳು ಅಳಿವಂಚಿನಲ್ಲಿರುವ ಪರಿಸರ ತಜ್ಞರ ವರದಿಗೆ ವಿಶ್ವಸಂಸ್ಥೆ ಜೀವ ವೈವಿಧ್ಯ ಮಂಡಳಿ ಕಳವಳ ವ್ಯಕ್ತಪಡಿಸಿತ್ತು. ಸಿಂಗಳೀಕದ ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಭಾರತಕ್ಕೆ ಸೂಚಿಸಿತ್ತು. ಅದರಂತೆ ಕೇಂದ್ರ, ರಾಜ್ಯ ಸರ್ಕಾರ ಸಿಂಗಳೀಕ ಸಂರಕ್ಷಣೆಗಾಗಿ ಫಾರೆಸ್ಟ್/ವೈಲ್ಡ್‌ಲೈಫ್ ಆಕ್ಟ್‌ನಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿಗೆ ನೀಡಿದಷ್ಟೇ ಪ್ರಧಾನ ಆದ್ಯತೆ ನೀಡಿದೆ.
ಅಳಿವಿಂಚಿನಲ್ಲಿರುವ ಸಿಂಗಳೀಕ ಎತ್ತರದ ಮರಗಳ ಮೇಲೆ ಹಣ್ಣುಗಳನ್ನು ತಿಂದು ಸ್ವಚ್ಛಂದವಾಗಿ ಹಾರಾಡುತ್ತ ಬದುಕುವ ಜೀವಿ. ಪ್ರಸ್ತುತ ಮರದಿಂದ ಕೆಳಗಿಳಿದು ಆಗುಂಬೆಯಲ್ಲಿ ರಸ್ತೆ ಮೇಲೆ ಆಹಾರಕ್ಕಾಗಿ ಹಪಹಪಿಸುವುದು ನೋಡುವಾಗ ತುಂಬ ಬೇಸರವಾಗುತ್ತಿದೆ. ಅರಣ್ಯದ ಮೇಲೆ ಮಾನವ ಹಸ್ತಕ್ಷೇಪ, ಕಾಡಿನಲ್ಲಿ ಆಹಾರ ಕೊರತೆ ಇದಕ್ಕೆ ಕಾರಣ. - ಡಾ.ಎನ್.ಎ ಮಧ್ಯಸ್ಥ, ಪರಿಸರ ತಜ್ಞ, ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಪ್ರವಾಸಿಗರು ರಸ್ತೆಬದಿಯಲ್ಲಿ ಎಸೆಯುವ ಆಹಾರ ಪದಾರ್ಥ ತ್ಯಾಜ್ಯದಿಂದಾಗಿ ಅಳಿವಿನಂಚಿನಲ್ಲಿರುವ ಸಿಂಗಳೀಕಗಳ ಮೇಲೆ ಪರಿಣಾಮ ಬೀಳುತ್ತಿದೆ. ಇದರ ನಡವಳಿಕೆ ಬದಲಾಗುತ್ತದೆ. ಮರಗಳ ಮೇಲೆ ಇರಬೇಕಾದ ಪ್ರಾಣಿ ರಸ್ತೆಗೆ ಬಂದು ಆಗಾಗ್ಗೆ ರಸ್ತೆ ಅಪಘಾತಗಳಲ್ಲಿ ಸಾಯುವಂತಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಹುಲಿಯಷ್ಟೇ ಸಮಾನವಾಗಿ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. - ರುದ್ರನ್, ಡಿಸಿಎಫ್, ಕುದುರೆಮುಖ ವನ್ಯಜೀವಿ ವಿಭಾಗ