ಲಿಂಗಸುಗೂರು ಭೂಸುರಕ್ಷಾ ಯೋಜನೆಯಡಿ ದಾಖಲೆಗಳ ಸ್ಕ್ಯಾನಿಂಗ್, ದಾಖಲೀಕರಣ ಮಾಡುತ್ತಿರುವ ಸಿಬ್ಬಂದಿ. 
ಜಿಲ್ಲೆ

ಬೆರಳ ತುದಿಯಲ್ಲೇ ಭೂ ದಾಖಲೆಗಳು - ಲಿಂಗಸುಗೂರಿನಲ್ಲಿ ಗಣಕೀಕೃತ ಪ್ರಕ್ರಿಯೆ ಪ್ರಗತಿ

ಶ್ರೀನಾಥ

ಲಿಂಗಸುಗೂರು: ಇಲ್ಲಿನ ಕಂದಾಯ ಇಲಾಖೆಯು ಕೈ ಬರಹದಲ್ಲಿ ಭೂ ದಾಖಲೆಗಳನ್ನು ನೀಡುವ ವ್ಯವಸ್ಥೆಗೆ ತಿಲಾಂಜಲಿ ಹಾಡಲಿದ್ದು, ಇನ್ನು ಮುಂದೆ ಡಿಜಿಟಲ್ ರೂಪದಲ್ಲೇ ವಿತರಿಸಲು ಮುಂದಾಗಿದೆ.

ಕಂದಾಯ ಇಲಾಖೆಯಲ್ಲಿ 1954 ರಿಂದ ಇರುವ ಹಳೇ ದಾಖಲೆಗಳನ್ನು ಸಂರಕ್ಷಿಸಲು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ 2024ರ ಫೆಬ್ರವರಿಯಲ್ಲಿ ಭೂ ಸುರಕ್ಷಾ ಯೋಜನೆ ಜಾರಿಗೆ ತರಲಾಯಿತು.

ರೈತರು, ಸಾರ್ವಜನಿಕರು ಹೊಂದಿರುವ ಹಳೇ ಭೂ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಕ್ಯಾಟ್‌ಲಾಗಿಂಗ್ ಮತ್ತು ಇಂಡೆಕ್ಸಿಂಗ್ ವ್ಯವಸ್ಥೆಯಡಿ ಗಣಕೀಕರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಇದರಿಂದ ಹಳೆಯ ಕಡತಗಳು, ವಹಿಗಳು, ಭೂ ದಾಖಲೆ ಪುಟಗಳು ಸಂರಕ್ಷಣೆ, ವಂಚನೆ ತಪ್ಪಲಿದ್ದು, ಸಾರ್ವಜನಿಕರಿಗೆ ಸುಲಭವಾಗಿ ದಾಖಲೆಗಳು ಬೆರಳ ತುದಿಯಲ್ಲೇ ಸಿಗಲಿವೆ.

ಕಡತ ಮತ್ತು ವಹಿಗಳ ಸಂಖ್ಯೆ: ಲಿಂಗಸುಗೂರು ತಾಲೂಕು ಕಂದಾಯ ಇಲಾಖೆಯಲ್ಲಿ 40,102 ಕಡತಗಳಿವೆ. ಈ ಪೈಕಿ 8,498 ಕಡತಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.

ಇದರಲಿ 9,037 ದಾಖಲೆಗಳು, 1,17,990 ಪುಟಗಳಿದ್ದು, ಇನ್ನು 31,604 ಕಡತಗಳ ದಾಖಲೀಕರಣ ಬಾಕಿ ಇದೆ. ಜತೆಗೆ 4,198 ವಹಿಗಳಿದ್ದು, ಈವರೆಗೆ 2,841 ವಹಿಗಳನ್ನು ದಾಖಲೀಕರಣಗೊಳಿಸಲಾಗಿದೆ.

ಇದರಲ್ಲಿ 46,531 ದಾಖಲೆಗಳು, 7,21,486 ಪುಟಗಳನ್ನು ಗಣಕೀಕರಣಗೊಳಿಸಲಾಗಿದೆ. ಇನ್ನು 1,357 ವಹಿಗಳ ದಾಖಲೀಕರಣ ಬಾಕಿ ಇದ್ದು, ಕಡತ, ಪುಟಗಳು ಹಾಗೂ ವಹಿಗಳು ಸೇರಿ ಈವರೆಗೆ ಒಟ್ಟು 83,9476 ದಾಖಲೀಕರಣ ಮಾಡಲಾಗಿದೆ.

=====

ಹಳೇ ದಾಖಲೆಗಳನ್ನು ಸಂರಕ್ಷಣೆ ಮಾಡಲು, ಭೂ ದಾಖಲೆಗಳು ಕಳೆದು ಹೋಗುವುದನ್ನು ತಪ್ಪಿಸಲು, ರೈತರು, ಸಾರ್ವಜನಿಕರು ಆನ್‌ಲೈನ್ ಮುಖಾಂತರ ದಾಖಲೆಗಳನ್ನು ಪಡೆಯುವ ಸೌಲಭ್ಯ ಒದಗಿಸಲು ಭೂ ಸುರಕ್ಷಾ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈವರೆಗೆ ತಾಲೂಕಿನ ವಹಿಗಳು, ಕಡತಗಳ ಪುಟಗಳು ಸೇರಿ 8,3947 ಸ್ಕ್ಯಾನಿಂಗ್ ಮಾಡಿ ದಾಖಲೀಕರಣ ಮಾಡಲಾಗಿದ್ದು, ಬಾಕಿ ಕಡತಗಳ ದಾಖಲೀಕರಣ ಶೀಘ್ರವೇ ಮಾಡಲಾಗುವುದು.

> ಸತ್ಯಮ್ಮ, ತಹಸೀಲ್ದಾರ್, ಲಿಂಗಸುಗೂರು

======

ಈ ಮೊದಲು ಕೈ ಬರಹದ ಭೂ ದಾಖಲೆಗಳನ್ನು ಪಡೆಯುತ್ತಿದ್ದೆ. ಭೂ ಸುರಕ್ಷಾ ಯೋಜನೆಯಡಿ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದ್ದರಿಂದ ಆನ್‌ಲೈನ್‌ನಲ್ಲಿಯೇ ಸಿಗುತ್ತಿದ್ದು, ಬೇಕಾದ ಕೂಡಲೇ ಪಡೆಯಲು ಅನುಕೂಲವಾಗಿದೆ.

> ಹನುಮಂತ ಗುಡದನಾಳ, ರೈತ, ಗುಡದನಾಳ