ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಗುರುವಾರ ಜರುಗಿದ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ನಾಡೋಜ ಡಾ.ಅನ್ನದಾನೀಶ್ವರ ಶ್ರೀಗಳವರಿಗೆ ಶ್ರೀನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಗೌರವ ವಂದನೆ ಸಲ್ಲಿಸಿದರು. ಎಸ್.ಎಸ್. ಗಡ್ಡದ, ಪಾಲಾಕ್ಷಿ ಗಣದಿನ್ನಿ, ವಿ.ಎಸ್. ಗಟ್ಟಿ, ಶಿವಕುಮಾರ ಬೆಟಗೇರಿ ಇದ್ದರು. 
ಜಿಲ್ಲೆ

ಲಿಂಗಾಯತರು ಮಾನವ ಹಕ್ಕುಗಳ ಪ್ರತಿಪಾದಕರು

ಮುಂಡರಗಿ: ಕರ್ನಾಟಕದಲ್ಲಿ ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಮಠಗಳ ಪರಂಪರೆ ವಿಶಿಷ್ಟವಾಗಿದೆ. ಲಿಂಗಾಯತ ಪರಂಪರೆಗೆ ದೊಡ್ಡ ಇತಿಹಾಸವಿದೆ. ಲಿಂಗಾಯತರು ವಿಶ್ವಸಂಸ್ಥೆ ಮಾನವ ಹಕ್ಕುಗಳ ಪ್ರತಿಪಾದಕರು. ಲಿಂಗಾಯತ ಪರಂಪರೆಯ ಬಗ್ಗೆ ಬಹು ದೊಡ್ಡ ಚಿಂತನೆಯಾಗಬೇಕು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳ 157ನೇ ಜಯಂತ್ಯುತ್ಸವ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಶ್ರೀಕುಮಾರೇಶ್ವರ ಜೀವನ ದರ್ಶನ ಪ್ರವಚನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ಲಿಂಗಾಯತ ಮಠಾಧೀಶರು ಮಠಮಾನ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜಾತಿ, ಮತ, ಪಂಥವಿಲ್ಲದೆ ಎಲ್ಲ ಸಮುದಾಯದವರಿಗೆ ಶಿಕ್ಷಣ ನೀಡಿ ಅವರ ಮನೆಗಳಿಗೆ ಬೆಳಕಾದರು ಎಂದು ಹೇಳಿದರು.

ಲಿಂಗಾಯತ ಮಠಾಧೀಶರು ಮಾಡಿದ ಕಾರ್ಯವನ್ನು ರಾಷ್ಟ್ರ ಗುರುತಿಸಲಿಲ್ಲ. ಅನುಭಾವದಿಂದ ಸಮಾಜ ಕಟ್ಟುವ ಕೆಲಸವಾಗಬೇಕು. ಈ ಸಮಾಜಕ್ಕೆ ಬಸವಣ್ಣ ಎನ್ನುವಂತ ಹೃದಯವಿರಬೇಕು. ಲಿಂಗಾಯತರು ಲಿಂಗ ಧರಿಸಿಕೊಂಡು ಬಾಳಬೇಕು. ಲಿಂಗಾಯತರಿಗೆ ನಮ್ಮದೆ ಆದ ಪರಂಪರೆಯಿದ್ದು, ಅದನ್ನು ಗಟ್ಟಿಗೊಳಿಸಬೇಕು. ಕಾಯಕ, ದಾಸೋಹ, ಶಿವಯೋಗ, ಅನುಭಾವದ ಪರಂಪರೆ ಮೂಲಕ ಸಮಾಜ ಕಟ್ಟಬೇಕು ಎಂದರು.

ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂ.ಅನ್ನದಾನೀಶ್ವರ ಶಾಸ್ತ್ರೀ ಕುಮಾರೇಶ್ವರರ ಕುರಿತು ಪ್ರವಚನ ನೀಡಿದರು. ಕುಮಾರ ಶಿವಯೋಗಿಗಳ ಜಯಂತಿ ಉತ್ಸವ ಸಮಿತಿ ಪೂಜ್ಯರು ಉಪಸ್ಥಿತರರು ಇದ್ದರು.