ಜಿಲ್ಲೆ

ಪೂರ್ವಭಾವಿ ಸಭೆಗೆ ಆಹ್ವಾನಿಸದೇ ನಿರ್ಲಕ್ಷ್ಯ: ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಂಜುನಾಥ್ ಬೇಸರ

ಮಂಡ್ಯ: ಬಸವ ಜಯಂತಿ ಪೂರ್ವಭಾವಿ ಸಭೆಗೆ ಎಲ್ಲ ಸಮುದಾಯದವರನ್ನು ಆಹ್ವಾನಿಸಬೇಕಿತ್ತು. ಆದರೆ ಈ ವಿಚಾರದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಸರಿಯಲ್ಲ ಎಂದು ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಜಯಂತಿಗೆ ಸಂಬಂಧಿಸಿದಂತೆ ಒಂದು ಸಮುದಾಯದ ಸಂಘಟನೆಯ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ, ಲೋಪವೆಸಗಿದ ಕಾರಣ ಮರು ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಜಿಲ್ಲಾಡಳಿತ ಎಲ್ಲ ಧರ್ಮೀಯರು, ಸಂಘಟನೆಗಳನ್ನು ಒಗ್ಗೂಡಿಸಿ ಬಸವ ಜಯಂತಿ ಆಚರಿಸಲು ಮುಂದಾಗಬೇಕು. ಬಸವ ಜಯಂತಿ ಸಂಬಂಧ ಮೆರವಣಿಗೆ ರದ್ದುಗೊಳಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರ ಅಳವಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಆದಾಗ್ಯೂ ಜಿಲ್ಲಾ ಪಂಚಾಯಿತಿ, ಪೊಲೀಸ್ ಠಾಣೆ ಹಾಗೂ ಇತರ ಸರ್ಕಾರಿ ಕಚೇರಿಯಲ್ಲಿ ಪಾಲನೆಯಾಗುತ್ತಿಲ್ಲ. ಕೇಂದ್ರ ಸರ್ಕಾರ ಬಸವ ಜಯಂತಿ ಆಚರಿಸಲು ಮುಂದಾಗಿದ್ದು, ನೂತನ ಸಂಸತ್ ಭವನದ ಮುಂದೆ ಬಸವೇಶ್ವರರ ಪುತ್ಥಳಿ ಸ್ಥಾಪನೆ ಮಾಡುವಂತೆ ಆಗ್ರಹಿಸಿದರು.

ಉಪಾಧ್ಯಕ್ಷ ಶಿವಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಶಿವರುದ್ರಪ್ಪ, ಎಲ್.ಡಿ.ನಂದೀಶ್, ಮಲ್ಲಿಕಾರ್ಜುನಪ್ಪ, ಸುಂಡಹಳ್ಳಿ ಸೋಮಶೇಖರ್, ಅಮ್ಜದ್ ಪಾಷಾ ಇತರರಿದ್ದರು.