ಜಿಲ್ಲೆ

ಪ್ರೊ.ಭಗವಾನ್‌ಗೆ ಹೆಚ್ಚಿನ ಭದ್ರತೆ ಒದಗಿಸಿ; ತಹಸೀಲ್ದಾರ್ ಚಾಮರಾಜ ಪಾಟೀಲಗೆ ದಸಂಸ, ದಲಿತಪರ ಸಂಘಟನೆ ಒಕ್ಕೂಟ ಮನವಿ

ಲಿಂಗಸುಗೂರು: ಪ್ರಗತಿಪರ ಚಿಂತಕ, ಸಾಹಿತಿ ಕೆ.ಎಸ್. ಭಗವಾನರ ಮುಖಕ್ಕೆ ಕಪ್ಪುಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಸಂಸ ಮತ್ತು ದಲಿತಪರ ಸಂಘಟನೆ ಒಕ್ಕೂಟದ ಮುಖಂಡರು ತಹಸೀಲ್ದಾರ್ ಚಾಮರಾಜ ಪಾಟೀಲಗೆ ಶನಿವಾರ ಪ್ರತ್ಯೇಕ ಮನವಿ ಸಲ್ಲಿಸಿದರು.

ಮನುಸ್ಮತಿಯ ಕಥೆ ಪ್ರಶ್ನಿಸುವ ವ್ಯಕ್ತಿಗಳ ಹತ್ಯೆಯಾಗುತ್ತಿದ್ದು, ಇದಕ್ಕೆ ಸಾಹಿತಿಗಳಾದ ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶರನ್ನು ಹತ್ಯೆಯೇ ಸಾಕ್ಷಿಯಾಗಿದೆ. ಹಿಂದುಳಿದ ವರ್ಗಗಳ, ಶೋಷಿತರ, ದಲಿತರ, ಅಲ್ಪಸಂಖ್ಯಾತರ ಪರವಾಗಿ ಹಿಂದುತ್ವ ವಾದಿಗಳ ವಿರುದ್ಧ ಧ್ವನಿ ಎತ್ತುತ್ತಿರುವ ಕೆ.ಎಸ್.ಭಗವಾನರಿಗೆ ಉದ್ಧೇಶಪೂರ್ವಕವಾಗಿ ಅವರ ಮುಖಕ್ಕೆ ಕೋರ್ಟ್ ಆವರಣದಲ್ಲಿಯೇ ಮಸಿ ಬಳಿಯುವ ಕೃತ್ಯವೆಸಗಿದ್ದು, ಬಹುಸಂಖ್ಯಾತರಿಗೆ ಮಾಡಿದ ಅವಮಾನವಾಗಿದೆ.

ಸಾಹಿತಿಗಳ, ಬರಹಗಾರರ ಧ್ವನಿ ಅಡಗಿಸುವುದನ್ನು ಬಿಟ್ಟು ಪ್ರಜಾಪ್ರಭುತ್ವದ ಅತಿದೊಡ್ಡ ದೇಶದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಡುಹಗಲೇ ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಸಾಹಿತಿ ಭಗವಾನರ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರರನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಭಗವಾನ್‌ರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.