ಜಿಲ್ಲೆ

ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಮೋಸ ಮಾಡಿದ್ದಾಗಿ ಅಕ್ಷರ ದಾಸೋಹ ನೌಕರರ ಸಂಘ ಆರೋಪ

ಲಿಂಗಸುಗೂರು: ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಬಿಸಿಯೂಟ ನೌಕರರ ಬೇಡಿಕೆ ಈಡೇರಿಸದೆ ಮೋಸ ಮಾಡಿದೆ ಎಂದು ಆರೋಪಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.

ಫೆಬ್ರುವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನೌಕರರು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ ವೇಳೆ ಶಿಕ್ಷಣ ಸಚಿವ ಸುರೇಶ ಕುಮಾರ ಆಪ್ತ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಬೇಡಿಕೆ ಈಡೇರಿಕೆ ಮತ್ತು ವೇತನ ಹೆಚ್ಚಳದ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡದೆ ನೌಕರರಿಗೆ ಮೋಸ ಮಾಡಿದೆ. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಮಾತುಕತೆಯಲ್ಲಿ ನೀಡಿದ ಆಶ್ವಾಸನೆಗಳ ಪ್ರಕಾರ ಬೇಡಿಕೆಗಳನ್ನು ಈಡೇರಿಸಬೇಕು. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮಾ.16 ರಂದು ರಾಜ್ಯ ಮಟ್ಟದ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶೇಕ್ಷಾ ಖಾದ್ರಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಎಂ.ಡಿ.ಹನೀಫ್, ಫಾತೀಮಾ, ಅರುಣಾ ಕುಮಾರಿ, ಮಮ್ತಾಜ್ ಬೇಗಂ, ರೇಣುಕಾ, ಮಾಣಿಕ್ಯಮ್ಮ, ಮಹ್ಮದ್‌ಸಾಬ, ಬಾಬಾಜಾನಿ ಸೇರಿದಂತೆ ಇತರರಿದ್ದರು.