ಲಿಂಗಸುಗೂರು: ಪಟ್ಟಣದ ಸ್ವಾಮಿ ವಿವೇಕಾನಂದ ಬಡಾವಣೆಯ ಯುವಕರು ಬಿಸಿಲ ಶಾಖದಿಂದ ಕಡಾಯ (ತವಾ) ಮೇಲೆ ಆಮ್ಲೇಟ್ ತಯಾರಿಸುವ ಮೂಲಕ ಬೇಸಿಗೆ ತಾಪಮಾನದ ಭೀಕರತೆಯನ್ನು ಬುಧವಾರ ಸಾಕ್ಷಿಕರಿಸಿದ್ದಾರೆ.
ಪ್ರಭು ಗಸ್ತಿ ಗೆಳೆಯರ ಬಳಗ ಮಧ್ಯಾಹ್ನ 12 ಗಂಟೆಗೆಯಿಂದ ಒಂದುವರೆ ಗಂಟೆಕಾಲ ಬಿಸಿಲಿನಲ್ಲಿ ತವಾ ಇಟ್ಟಿದ್ದಾರೆ. ಕಾದ ಹಂಚಿನ ಮೇಲೆ ಮೊಟ್ಟೆ ಸುರಿದು ಉಪ್ಪು, ಖಾರ, ಎಣ್ಣೆ ಹಾಕಿ ಬಿಸಿ ಬಿಸಿ ಆಮ್ಲೇಟ್ ತಯಾರಿಸಿದ್ದಾರೆ. ಬೇಸಿಗೆ ಬಿಸಿಲಿನ ತಾಪಮಾನ ಪ್ರಖರತೆ ಕುರಿತು ವಿನೂತನ ಪ್ರಯೋಗದಿಂದ ಅಚ್ಚರಿ ಒಳಗಾಗಿದ್ದಾರೆ. ಗೆಳೆಯರ ಬಳಗದ ಆಂಜನೇಯ ಭಂಡಾರಿ, ವಸಂತ ತಾಂಡೂರು, ಭೀಮೇಶ ನಾಯಕ ಇದ್ದರು.
ಪ್ರಸಕ್ತ ವರ್ಷ ಬೇಸಿಗೆ ಬಿರುಬಿಸಿಲು ಲಿಂಗಸುಗೂರು ಜನತೆಯನ್ನು ತಲ್ಲಣಗೊಳಿಸಿದ್ದು, ಸೂರ್ಯನ ಪ್ರಖರವಾದ ಕಿರಣಗಳಿಂದ ಭೂಮಿಯು ಸುಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗವು ಅತಿಹೆಚ್ಚು ದಾಖಲೆ ಬಿಸಿಲಿನ ತಾಪಮಾನ ಹೊಂದಿರುವ ಪ್ರದೇಶವಾಗಿದೆ. ಪ್ರಸಕ್ತ ವರ್ಷ ಬರಗಾಲ ಛಾಯೆ ಆವರಿಸಿ ಬೇಸಿಗೆ ಬಿರು ಬಿಸಿಲಿನ ಪ್ರಖರತೆ ದಾಖಲೆಯತ್ತ ಸಾಗುತ್ತಿದೆ. ಇದೇ ಮೊದಲ ಬಾರಿಗೆ ರಾಯಚೂರಲ್ಲಿ 46.7 ಡಿಗ್ರಿ ಉಷ್ಣಾಂಶ ದಾಖಲಾಗುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ತಾಪ ಹೊಂದಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ.