ಲಿಂಗಸುಗೂರು ತಾಲೂಕು ಕನಸಾವಿ ಗ್ರಾಮದಲ್ಲಿ ಸೋಮವಾರ ನರೇಗಾ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು. 
ಜಿಲ್ಲೆ

ನರೇಗಾ ಕೆಲಸಕ್ಕೆ ಕಾರ್ಮಿಕರ ಹಿಂದೇಟು - ಎನ್‌ಎಂಎಂಎಸ್ ಆ್ಯಪ್ ಅಳವಡಿಕೆ ಪರಿಣಾಮ

ಶ್ರೀನಾಥ

ಲಿಂಗಸುಗೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ನಡೆಯುತ್ತಿದ್ದ ಅಕ್ರಮವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ರಾಷ್ಟ್ರೀಯ ಮೇಲ್ವಿಚಾರಣಾ ವ್ಯವಸ್ಥೆ (ಎನ್‌ಎಂಎಂಎಸ್ ಆ್ಯಪ್) ಅಳವಡಿಸಿದ್ದರಿಂದ ಕಾರ್ಮಿಕರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು, ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ.

ನರೇಗಾ ಯೋಜನೆಯನ್ನು ಹೆಚ್ಚು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಎಲ್ಲ ಸಮುದಾಯ ಕಾಮಗಾರಿಗಳನ್ನು ಎನ್‌ಎಂಎಂಎಸ್ ಆ್ಯಪ್ ಮುಖಾಂತರ ಕೂಲಿ ಕಾರ್ಮಿಕರ ಹಾಜರಾತಿಯನ್ನು ಜಿಯೋ ಟ್ಯಾಗ್ಡ್ ಫೋಟೋಗ್ರಾಫ್‌ಗಳ ಮೂಲಕ ಪ್ರತಿದಿನ ಎರಡು ಬಾರಿ ಕಡ್ಡಾಯವಾಗಿ ಸೆರೆಹಿಡಿಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು 2025ರ ಮಾ.24 ರಂದು ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ ಪತ್ರ ಬರೆದಿದ್ದಾರೆ.

ಸೆರೆಹಿಡಿದ ಫೋಟೋಗಳನ್ನು ವೀಕ್ಷಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ. 2025ರ ಏ.1 ರಿಂದ ಎನ್‌ಎಂಎಂಎಸ್‌ನಲ್ಲಿ ಪಡೆಯಲಾಗಿರುವ ಹಾಜರಾತಿಗಳಿಗೆ ಗ್ರಾಮ ಪಂಚಾಯಿತಿ ಕಾಮಗಾರಿಗಳಿಗೆ ಸಂಬಂಧಪಟ್ಟ ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಪರಿಶೀಲಿಸಿ, ದೃಢೀಕರಿಸಿ ಸಹಿ ಮಾಡಬೇಕು.

ಇದರಿಂದ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ನೈಜ ಕಾರ್ಮಿಕರಿಗೆ ಕೂಲಿ ಮೊತ್ತ ಪಾವತಿಸಲಾಗುತ್ತದೆ. ಇದನ್ನು ಉಲ್ಲಂಘಿಸಿ ಕೂಲಿ ಮೊತ್ತ ಪಾವತಿಸಿದಲ್ಲಿ ಸಂಬಂಧಿಸಿದವರನ್ನು ನೇರ ಹೊಣೆ ಮಾಡಿ ಶಿಸ್ತು ಕ್ರಮ ವಹಿಸಲಾಗುವುದೆಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಈ ಮೊದಲು ಕಾಮಗಾರಿ ಮತ್ತು ಕಾರ್ಮಿಕರ ಫೋಟೋಗಳನ್ನು ಅಪ್ಲೋಡ್ ಮಾಡುವಾಗ ಸಾಕಷ್ಟು ಲೋಪ ಎಸಗಿ ಅಕ್ರಮದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಅಪ್ರಸ್ತುತ ಫೋಟೋ, ಕೆಲಸಗಾರರ ಎಣಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಬೆಳಗ್ಗೆ ಕೆಲಸಕ್ಕೆ ಬಂದವರು ಮಧ್ಯಾಹ್ನ ಇರುತ್ತಿರಲಿಲ್ಲ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಹಾಜರಾತಿ ಮತ್ತು ಛಾಯಾಚಿತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.

ಮಾನವದಿನ ಸೃಜನೆಯಲ್ಲಿ ಇಳಿಕೆ

ಲಿಂಗಸುಗೂರು ತಾಲೂಕಿನಲ್ಲಿ ಪ್ರಸಕ್ತ ಸಾಲಿಗೆ 16.11 ಲಕ್ಷ ಕೂಲಿ ಕಾರ್ಮಿಕರ ಮಾನವದಿನ ಸೃಜನೆ ಮಾಡುವ ಗುರಿ ನೀಡಲಾಗಿದೆ. ಈ ಪೈಕಿ ಆಗಸ್ಟ್ ತಿಂಗಳೊಳಗೆ 10 ಲಕ್ಷ ಕೂಲಿ ಕಾರ್ಮಿಕರ ಮಾನವ ದಿನ ಸೃಜಿಸಬೇಕಿತ್ತು. ಆದರೆ, ಈವರೆಗೆ 7.80 ಲಕ್ಷ ಕೂಲಿ ಕಾರ್ಮಿಕರ ಮಾನವದಿನ ಸೃಜಿಸಲಾಗಿದೆ. ಇನ್ನು ಮುಂದೆಯೂ ನಿಗದಿಪಡಿಸಿದ ಗುರಿ ತಲುಪುವುದು ಅನುಮಾನ ಎನ್ನಲಾಗುತ್ತಿದೆ.

====

ನರೇಗಾ ಕೂಲಿ ಕಾರ್ಮಿಕರು ಕೆಲಸ ಮಾಡಲು ಸ್ಥಳದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಬಾರಿ ಕಡ್ಡಾಯವಾಗಿ ಫೋಟೋ ಸೆರೆ ಹಿಡಿಯಲು ಆದೇಶ ಬಂದಿದೆ. ಇದರಿಂದ ಹಾಜರಾತಿ ಕಡಿಮೆಯಾಗಿದೆ. ಪಾರದರ್ಶಕವಾಗಿ ಕೆಲಸ ಮಾಡಲು ಎನ್‌ಎಂಎಂಎಸ್ ತಂತ್ರಾಂಶ ಅನುಕೂಲವಾಗಿದೆ.

ಉಮೇಶ, ತಾಪಂ ಇಒ, ಲಿಂಗಸುಗೂರು