ಲಿಂಗಸುಗೂರು: ರಾಷ್ಟ್ರೀಯ ಹೆದ್ದಾರಿ 150(ಎ) ಕಾಮಗಾರಿ ಪ್ರಗತಿಯಲ್ಲಿದೆ. ಇದರಲ್ಲಿ ಭೂಮಿ ಕಳೆದುಕೊಂಡ ರೈತರು ದಾಖಲೆಗಳನ್ನು ಒದಗಿಸಿದರೆ ಪರಿಹಾರ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಶ್ರೀನಿವಾಸಗೌಡ ಹೇಳಿದರು.
ಮಂಗಳವಾರ ಪಟ್ಟಣದ ಐಎಂಎ ಸಭಾಂಗಣದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ಫಲಾನುಭವಿಗಳ ಸಭೆಯಲ್ಲಿ ಅಹವಾಲು ಆಲಿಸಿ ಮಾತನಾಡಿದರು. ಸಭೆಯಲ್ಲಿ ಮಾತನಾಡಿದ ದೊಡ್ಡಪ್ಪ ಸಾಹುಕಾರ, ಪಟ್ಟಣದ ಬೈಪಾಸ್ ರಸ್ತೆಗಾಗಿ ಕಳೆದ ಹದಿನೈದು ವರ್ಷಗಳ ಹಿಂದೆ ಪಿಡಬ್ಲುೃಡಿ ಡಾಂಬರೀಕರಣ ಕೈಗೊಂಡಿತು. ಆಗಲೂ ಭೂ ಪರಿಹಾರ ನೀಡಲಿಲ್ಲ. ಇದೀಗ ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರಿಸಿ ಹೆದ್ದಾರಿ ಕಾಮಗಾರಿ ಕೈಗೊಳ್ಳಲು ರಸ್ತೆಯ ಎರಡೂ ಬದಿಯಿಂದ 15 ಮೀಟರ್ ಎಂದು ಗೆಜೆಟ್‌ನಲ್ಲಿ ತೋರಿಸಿ, ಕೇವಲ 9 ಮೀಟರ್‌ಗೆ ಸರ್ವೇ ಕೈಗೊಳ್ಳಲಾಗಿದೆ. ಸುಮಾರು 52 ರೈತರು ಭೂಮಿ ಕಳೆದುಕೊಂಡಿದ್ದಾರೆ. ಆದರೆ, ಇದುವರೆಗೆ ಭೂ ಪರಿಹಾರ ನೀಡಿಲ್ಲ ಎಂದರು.
ಸ್ಪಂದಿಸಿದ ಶ್ರೀನಿವಾಸಗೌಡ, ಕೇಂದ್ರ ಸರ್ಕಾರ ಪ್ರಥಮ ಹಂತದಲ್ಲಿ ಬಿಡುಗಡೆ ಮಾಡಿದ ಪರಿಹಾರ ಹಣದಷ್ಟು ಸದರಿ ಹೆದ್ದಾರಿ ಕಾಮಗಾರಿಗೆ ರಸ್ತೆ ಮಧ್ಯದಿಂದ ಎರಡೂ ಬದಿ 9 ಮೀಟರ್ ಮಾತ್ರ ಅಳತೆ ಮಾಡಲಾಗಿದೆ. ಸರ್ಕಾರ ಎರಡನೇ ಹಂತದ ಹಣ ಬಿಡುಗಡೆ ಮಾಡಿದರೆ 15 ಮೀಟರ ಸರ್ವೇ ಕೈಗೊಳ್ಳಲಾಗುವುದು. ಹೆದ್ದಾರಿ ಕಾಮಗಾರಿಗೆ 33 ಫಲಾನುಭವಿಗಳು ಭೂಮಿ ಕಳೆದುಕೊಂಡಿರುವ ಮಾಹಿತಿಯಿದೆ. 52 ಜನ ಎಂದು ನೀವು ಹೇಳುತ್ತಿದ್ದೀರಿ. ಇಲಾಖೆಯಿಂದ 3ಜಿ ನೋಟಿಫಿಕೇಷನ್ ನೀಡಲಾಗುವುದು. ಫಲಾನುಭವಿಗಳು 15 ದಾಖಲೆಗಳನ್ನು ಇಲಾಖೆಗೆ ನೀಡಿದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮಾ ಮಾಡಲಾಗುವುದು ಎಂದರು.
ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲ್ವೆ, ವಿದ್ಯುತ್ ಟವರ್ ಕಂಬ, ಹೆದ್ದಾರಿ, ಮಿಲಿಟರಿ ಕ್ಯಾಂಪ್, ಇಸ್ರೋ ಸೇರಿದಂತೆ ಮಹತ್ವದ ಕಾಮಗಾರಿ ಅಥವಾ ಸ್ಥಾಪನೆಗೆ ಭೂಮಿ ಬಿಟ್ಟುಕೊಡಲೇಬೇಕೆಂಬ ನಿಯಮವಿದೆ. ಇದಕ್ಕೆ ಅಡ್ಡಿಪಡಿಸಿ ಕೋರ್ಟ್ ಮೊರೆ ಹೋದರೆ ಅದು ವ್ಯರ್ಥ ಪ್ರಯತ್ನ. ಪುರಾತನ ಐತಿಹಾಸಿಕ ಸ್ಥಳಗಳು, ಪುರಾತನ ಧಾರ್ಮಿಕ ಕೇಂದ್ರಗಳು ಸೇರಿದಂತೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದವುಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಹೆದ್ದಾರಿ ಕಾಮಗಾರಿ ವೇಳೆ ತಿರುವುಗಳು ಬಂದರೆ ನೇರವಾಗಿ ಕಾಮಗಾರಿ ಕೈಗೆತ್ತಿಕೊಂಡಾಗ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಜಮೀನಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಪರಿಹಾರ ಹಣ ನೀಡಲಾಗುವುದೆಂದು ಎಂದು ಹೇಳಿದರು.
ಪ್ರಮುಖರಾದ ದೊಡ್ಡಪ್ಪ ಸಾಹುಕಾರ, ಎಚ್.ಬಿ.ಮುರಾರಿ, ಸೋಮಶೇಖರ ಐದನಾಳ, ಶಿವಾನಂದ ಐದನಾಳ, ಶರಣಯ್ಯ ಗೊರೇಬಾಳ, ವಿಜಯೇಂದ್ರದಾಸ ಸೇರಿದಂತೆ ಇತರರು ಇದ್ದರು.