ಲಿಂಗಸುಗೂರು: ಸರ್ವ ಭೂತಾಂತರಾತ್ಮವೆಂದು ಕರೆಯುವ ದೇವತೆಗಳ ಪೈಕಿ ನಾಗದೇವತೆಗೂ ಪೂಜ್ಯನೀಯ ಸ್ಥಾನವಿದೆ. ಅಂತೆಯೇ ಶ್ರಾವಣ ಮಾಸದ ಶುದ್ಧ ಪಂಚಮಿಯಂದು ನಾಗರಾರಾಧನೆ ಮಾಡಲಾಗುತ್ತದೆ. ನಾಗಚತುರ್ಥಿ ದಿನವಾದ ಸೋಮವಾರ ಮಹಿಳೆಯರು ಮತ್ತು ಮಕ್ಕಳು ನಾಗದೇವತೆಗೆ ಹಾಲೆರೆದು, ತಿಂಡಿ-ತಿನಿಸುಗಳ ನೈವೇದ್ಯ ಸಮರ್ಪಿಸಿದರು.
ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ಧವಾಗಿರುವ ನಾಗರ ಪಂಚಮಿ ನಿಮಿತ್ತ ಜೋಳ, ಮೆಕ್ಕೆಜೋಳದಿಂದ ತಯಾರಿಸಿದ ಅರಳು, (ಪಾಪ್‌ಕಾರ್ನ್) ಹೆಸರು, ಎಳ್ಳು, ನವಣೆ, ಸಜ್ಜೆ, ಪುಟಾಣಿ, ಬೇಸನ್ ಇತರ ವಿವಿಧ ಬಗೆಯ ಸಹಿ ಉಂಡೆಗಳು, ಗೋಧಿಯ ಹುಗ್ಗಿ, ಕಡಲೆ ಕಾಳಿನ ತಿನಸುಗಳನ್ನು ತಯಾರಿಸಿ ನೈವೇದ್ಯದೊಂದಿಗೆ ಅರಳೆಯ ಅಂಗನೂಲು ತಯಾರಿಸಿ ನಾಗದೇವತೆಗೆ ಪೂಜೆ ಸಲ್ಲಿಸಿ ಹಾಲೆರೆದು ಭಕ್ತಿ ಸಮರ್ಪಿಸಿದರು. ಪಟ್ಟಣದ ಮಹಾಲಕ್ಷ್ಮೀ, ಈಶ್ವರ, ನಗರೇಶ್ವರ, ದೊಡ್ಡ ಹನುಮಂತ, ಯಲ್ಲಮ್ಮ ದೇವಿ ದೇವಸ್ಥಾನ ಸೇರಿದಂತೆ ವಿವಿಧೆಡೆ ನಾಗದೇವತೆ ಹಾಗೂ ಹುತ್ತಗಳಿಗೆ ಬೆಲ್ಲದ ಹಾಲೆರೆಯಲಾಯಿತು.