ಲಿಂಗಸುಗೂರು: ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಕೆಆರ್‌ಐಡಿಎಲ್ ಕೈಗೊಂಡಿರುವ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಾಯ ನಾಮನಿರ್ದೇಶಿತ ಸದಸ್ಯರಿಂದ ಕೇಳಿಬಂತು.
ಎರಡು ವರ್ಷಗಳಿಂದ ಮಾಡಿರುವ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ. ಅಲ್ಲದೆ ಅವ್ಯವಹಾರವೂ ನಡೆದಿದ್ದು, ಕಳೆದ ಸಭೆಯಲ್ಲಿ ತನಿಖೆ ನಡೆಸುವುದಾಗಿ ಹೇಳಲಾಗಿತ್ತು. ಆದರೆ, ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಕಳೆದ ವರ್ಷ 82 ಕಾಮಗಾರಿಗಳು, ಪ್ರಸಕ್ತ ಸಾಲಿನಲ್ಲಿ 62 ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡಿದ್ದು, ಗುಣಮಟ್ಟ ಪರಿಶೀಲನೆಗೆ ತಂಡ ರಚಿಸಿ ತನಿಖೆ ನಡೆಸಬೇಕೆಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಪರಮೇಶ ಗೋರ್, ರಾಘವೇಂದ್ರ, ಶರಣಪ್ಪ, ಶ್ವೇತಾ ಲಾಲಗುಂದಿ ಹಾಗೂ ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವಜ್ಜಲ್ ಅವರು, ಕಳೆದ ಕಾಮಗಾರಿಗೆ ಅವಕಾಶವಿಲ್ಲ. ತನಿಖೆ ನಡೆಸಲು ಈಗಲೂ ಸಿದ್ಧನಿದ್ದೇನೆ. ಕಳಪೆ ಕಾಮಗಾರಿ ಕುರಿತು ಈವರೆಗೆ ದೂರುಗಳು ಬಂದಿಲ್ಲವೆಂದು ತಿಳಿಸಿದರು. ಆಮದಿಹಾಳ, ಮುದಗಲ್, ಮಾಕಾಪುರ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಮಾಡಿಲ್ಲ. ಹೀಗಾಗಿ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ ಎಂದು ಪರಮೇಶ ಗೋರ್ ಆರೋಪಿಸಿದರು. ಆಮದಿಹಾಳ, ಮಾಕಾಪುರ ಕೇಂದ್ರಗಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅಮರೇಗೌಡ ತಿಳಿಸಿದರು.
ಆರು ಟಿಸಿಗಳು ಸುಟ್ಟಿದ್ದು, ಎರಡು ಟಿಸಿ ಹಂಚಿಕೆಯಾಗಿವೆ. ಗುರುಗುಂಟಾ, ಪೈದೊಡ್ಡಿ ವ್ಯಾಪ್ತಿಯಲ್ಲಿ 129 ದೊಡ್ಡಿಗಳಿವೆ. ನಿರಂತರ ಜ್ಯೋತಿ ಒದಗಿಸಲು 10 ಕೋಟಿ ರೂ. ಯೋಜನೆಯಾಗಿದ್ದರಿಂದ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಕೊಡಲು ಸಾಧ್ಯವಾಗಿಲ್ಲ ಎಂದು ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ ಸಭೆಗೆ ತಿಳಿಸಿದರು. ಜನರ ಬೇಡಿಕೆಯಂತೆ ಆನೆಹೊಸೂರಿಗೇ 110 ಕೆವಿ ಸ್ಟೇಷನ್ ಆಗಬೇಕು. ಸ್ಥಳಾಂತರ ಮಾಡಿದರೆ ನೆಟ್ಟಗಿರುವುದಿಲ್ಲ. ಯಾರದೇ ಒತ್ತಡಕ್ಕೆ ಮಣಿಯಬಾರದು ಎಂದು ಜೆಸ್ಕಾಂ ಅಧಿಕಾರಿಗೆ ವಜ್ಜಲ್ ತಾಕೀತು ಮಾಡಿದರು.
ಅನೇಕ ಶಾಲೆಗಳಿಗೆ ಕಾಂಪೌಂಡ್, ಅಡುಗೆ ಕೋಣೆ, ಶಾಲಾ ಕೊಠಡಿಗಳ ಅವಶ್ಯಕತೆಯಿದೆ ಎಂದು ಬಿಇಒ ಸುಜಾತಾ ಹುನೂರು ಸಭೆಗೆ ತಿಳಿಸಿದರು. ನರೇಗಾ ಯೋಜನೆಯಲ್ಲಿ ಸಾಕಷ್ಟು ಅನುದಾನವಿದೆ. ಶೌಚಗೃಹ, ಕಾಂಪೌಂಡ್, ಅಡುಗೆ ಕೋಣೆ ಅವಶ್ಯವಿರುವ ಶಾಲೆಗಳ ಪಟ್ಟಿ ನೀಡಿದರೆ ಕಾಮಗಾರಿ ಆರಂಭ ಮಾಡಲಾಗುವುದು ಎಂದು ತಾಪಂ ಇಒ ಉಮೇಶ ತಿಳಿಸಿದರು. ಶಾಸಕ ಮಾನಪ್ಪ ವಜ್ಜಲ್, ತಹಸೀಲ್ದಾರ್ ಸತ್ಯಮ್ಮ ಇತರರಿದ್ದರು.
ಜೆಜೆಎಂ ಕಾಮಗಾರಿಗೆ ಸಿಸಿ ರಸ್ತೆ ಅಗೆಯುವುದನ್ನು ನಿಲ್ಲಿಸಿ. ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ದೂರುಗಳು ಬಂದಿವೆ. ಕಳಪೆ ಕೆಲಸ ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಂಪೂರ್ಣ ವರದಿ ನೀಡಬೇಕೆಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಪರಮೇಶ್ವರ ಟೆಂಗಳೇಕರ್‌ಗೆ ಖಡಕ್ ಸೂಚನೆ ನೀಡಿದ ವಜ್ಜಲ್ ಅವರು, ಜಲಧಾರೆ ಯೋಜನೆ ಸಮರ್ಪಕ ಕೆಲಸ ಮಾಡಿಲ್ಲ. 800 ಕೋಟಿ ರೂ. ಪೈಕಿ 620 ಕೋಟಿ ರೂ. ಖರ್ಚಾಗಿದ್ದರೂ ಪ್ರಗತಿ ಕುಂಠಿತಗೊಂಡಿದೆ ಎಂದು ತರಾಟೆಗೆ ತೆಗೆದುಕೊಂಡರು. ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಪ್ರತಿಯೊಂದು ರೈತರ ಜಮೀನು ಸರ್ವೆ ಮಾಡಿ ಬೆಳೆಹಾನಿ ಕುರಿತು ವರದಿ ಸಲ್ಲಿಸಬೇಕು ಎಂದು ಕೃಷಿ ಅಧಿಕಾರಿ ಮಲ್ಲಿಕಾರ್ಜುನಗೆ ಸೂಚಿಸಿದರು.