ಜಿಲ್ಲೆ

ಉತ್ತಮ ಸಂಸ್ಕಾರಗಳಿಗಾಗಿ ದೇವಸ್ಥಾನಗಳ ನಿರ್ಮಾಣ; ಕಾಶಿ ಜಗದ್ಗುರು ಹೇಳಿಕೆ ಲಿಂಗಸುಗೂರಿನಲ್ಲಿ ಧರ್ಮ ಜಾಗೃತಿ ಅಭಿಯಾನ


ಲಿಂಗಸುಗೂರು: ದೇವಾಲಯಗಳು ಮತ್ತು ಮಠಗಳು ಜನರಿಗೆ ಉತ್ತಮ ಸಂಸ್ಕಾರ ನೀಡುವ ಕೇಂದ್ರಗಳಾಗಿವೆ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಪಟ್ಟಣದ ಈಶ್ವರ ದೇವಸ್ಥಾನದ ರಜತ ಮಹೋತ್ಸವ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಧರ್ಮ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನೆ ಭೋಗ ಭೂಮಿಯಾದರೆ, ಪುಣ್ಯಕ್ಷೇತ್ರಗಳು ಯೋಗ ಭೂಮಿಯಾಗಿವೆ. ಯೋಗ ಭೂಮಿಯಲ್ಲಿ ಕೆಲಕಾಲ ಸಮಯ ಕಳೆದಾಗ ಮನಸಿಗೆ ಶಾಂತಿ, ನೆಮ್ಮದಿ ದೊರೆಯಲಿದೆ ಎಂಬ ಭಾವನೆಯಿಂದ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳಲಾಗುತ್ತದೆ. ಜನರಲ್ಲಿ ಉತ್ತಮ ಸಂಸ್ಕಾರ ಬರಲಿದೆ ಎಂದು ದೃಷ್ಟಿಯಿಂದ ಪ್ರತಿ ಊರಿನಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುತ್ತದೆ ಎಂದರು.

ಪಟ್ಟಣದ ಈಶ್ವರ ದೇವಸ್ಥಾನ ಹಂತ ಹಂತವಾಗಿ ವಿಕಾಸಗೊಂಡು ರಜತ ಮಹೋತ್ಸವ ಆಚರಿಸುತ್ತಿದ್ದು, ಅಮರೇಶ್ವರ ಗುರುಗಜದಂಡ ಶಿವಾಚಾರ್ಯರ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವವೂ ಇಂದೇ ಇರುವುದು ಶುಭ ಸಂದೇಶವಾಗಿದೆ. ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಧರ್ಮ ಜಾಗೃತಿ ಮೂಡಿಸುವ ಕಾರ್ಯ ದೇವಸ್ಥಾನ ಸಮಿತಿಯ ಆದ್ಯ ಕರ್ತವ್ಯಾಗಿದೆ. ಬಹುಜನ ಹಿತಾಯ, ಬಹುಜನ ಸುಖಾಯ ಎಂಬಂತೆ ಜನರ ಕಲ್ಯಾಣಕ್ಕಾಗಿ ಸಮಾಜ ಮತ್ತು ಸರ್ಕಾರಗಳು ಸಹಕಾರ ನೀಡುತ್ತಾ ಬರುತ್ತಿವೆ ಎಂದು ಕಾಶಿ ಜಗದ್ಗುರುಗಳು ಹೇಳಿದರು.