ಲಿಂಗಸುಗೂರು: ತಾಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಹುಬ್ಬ ಮಳೆಯಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗದ ಕೆಲ ರಸ್ತೆಗಳು ಕೆಸರು ಗದ್ದೆಯಂತಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಬಸವ ಸಾಗರ ಜಲಾಶಯಕ್ಕೆ ತೆರಳುವ ರಸ್ತೆ, ಲಿಂಗಸುಗೂರು-ಗುಡದನಾಳ ರಸ್ತೆ ಹೆದಗೆಟ್ಟಿದ್ದು, ಅಲ್ಲಲ್ಲಿ ಬಿದ್ದ ತಗ್ಗು ಗುಂಡಿಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಗ್ರಾಮೀಣ ಭಾಗದ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದರಿಂದ ಅಲ್ಲಿನ ರಸ್ತೆಗಳ ಸ್ಥಿತಿಯೂ ಅಯೋಮಯವಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರಿನಲ್ಲಿ ಬಿತ್ತನೆಗೊಂಡ ಸಜ್ಜೆ, ಸೂರ್ಯಕಾಂತಿ, ಹೆಸರು, ಹಲಸಂದಿ ಇತರ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುವ ಹಂತ ತಲುಪಿದ್ದವು.
ಹುಬ್ಬ ಮಳೆಯಿಂದ ತೊಗರಿ, ಮೆಣಸಿನಕಾಯಿ ಇತರ ಬೆಳೆಗಳು ಅಲ್ಪ ಮಟ್ಟಿಗೆ ಕೈ ಹಿಡಿಯುವ ಸಾಧ್ಯತೆಯಿದ್ದು, ಹಿಂಗಾರು ಬಿತ್ತನೆಗೂ ರೈತರಲ್ಲಿ ಉತ್ಸಾಹ ಹೆಚ್ಚಿಸಿದೆ.