ಲಿಂಗಸುಗೂರು: ಕೃತಯುಗದಲ್ಲಿ ತಪಸ್ಸು, ತ್ರೇತಾಯುಗದಲ್ಲಿ ಜ್ಞಾನ, ದ್ವಾಪರ ಯುಗದಲ್ಲಿ ಯಜ್ಞ ಯಾಗಾದಿಗಳು ಪ್ರಧಾನವಾಗಿದ್ದವು. ಹಾಗೆಯೇ ಕಲಿಯುಗದಲ್ಲಿ ದಾನ ಧರ್ಮವೇ ಮೋಕ್ಷಕ್ಕೆ ಮಾರ್ಗವಾಗಿದೆ ಎಂದು ಬೊಮ್ಮನಾಳ ಬೃಹನ್ಮಠದ ಗುರುಶಾಂತ ಶಿವಾಚಾರ್ಯರು ಹೇಳಿದರು.
ತಾಲೂಕಿನ ಯರಡೋಣ ಕ್ರಾಸ್‌ನ ಸಿದ್ಧರಾಮೇಶ್ವರ ಗುರುಮಠದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ದಾಸೋಹ ಭವನ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮನುಷ್ಯ ಯಾವುದೇ ಪ್ರತಿಫಲ ಅಪೇಕ್ಷಿಸದೆ ಉದಾರ ಮನೋಭಾವದಿಂದ ದಾನ ಹಾಗೂ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗಲಿದೆ. ಮುಗಳಕೋಡದ ಸಿದ್ಧರಾಮೇಶ್ವರ ಸ್ವಾಮೀಜಿ, ಯಲ್ಲಾಲಿಂಗ ಮಹಾರಾಜರ ಅನುಗ್ರಹ ಮತ್ತು ಭಕ್ತರ ಸಹಕಾರದಿಂದ ಭವ್ಯವಾದ ದಾಸೋಹ ಭವನ ನಿರ್ಮಿಸಲು ಸಾಧ್ಯವಾಗಿದೆ ಎಂದರು.
ಶ್ರೀಮಠದ ಮುರುಘೇಂದ್ರ ಶಿವಯೋಗಿ ಸ್ವಾಮೀಜಿ ಮಾತನಾಡಿ, ಶ್ರೀಮಠದ ದಾಸೋಹ ಭವನ ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಮೇ 14 ರಿಂದ 21 ರವರೆಗೆ ಶ್ರೀ ಯಲ್ಲಾಲಿಂಗ ಮಹಾರಾಜರ ಪುರಾಣ ಪ್ರವಚನ, ಮೇ 22 ರಂದು ಬೆಳಗ್ಗೆ 63 ಗುರು ಜಂಗಮರ ಪಾದಪೂಜೆ, ಧರ್ಮಸಭೆ, ದಾಸೋಹ ಭವನ ಉದ್ಘಾಟನೆ ಮತ್ತು ಸಂಜೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.