ಲಿಂಗಸುಗೂರು: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಪಿಯುಸಿ ಫಲಿತಾಂಶದಲ್ಲಿ ಹಿನ್ನಡೆ ಕಂಡುಬರುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆ-ಕಾಲೇಜುಗಳನ್ನೇ ನಂಬಿ ವಿದ್ಯಾರ್ಜನೆಗೆ
ಬರುವ ಗ್ರಾಮೀಣ ಭಾಗದ ಮತ್ತು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಪೆಟ್ಟು ಬೀಳುತ್ತಿದೆ.
ಇದನ್ನೂ ಓದಿರಿ: ಸರ್ಕಾರಿ ಕಾಲೇಜಿಗೆ ಉಪನ್ಯಾಸಕರ ಕೊರತೆ
ಪಟ್ಟಣದಲ್ಲಿ 1981-82 ನೇ ಸಾಲಿನಲ್ಲಿ ಆರಂಭಗೊಂಡ ಸರ್ಕಾರಿ ಪದವಿಪೂರ್ವ ಕಾಲೇ ಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿವೆ. ಬೋ ಧಕ, ಬೋಧಕೇತರ ಸಿಬ್ಬಂದಿ, ಕಟ್ಟಡ, ಪೀಠೋಪಕರಣ ಕೊರತೆ, ಗ್ರಂಥಾಲಯ ಸೇರಿ ಒಂದಿಲ್ಲೊಂದು ಸಮಸ್ಯೆ ಗಳು ಸಾಮಾನ್ಯ ಎನ್ನುವಂತಾಗಿದೆ. ಹಂತ ಹಂತವಾಗಿ ಮೂಲ ಸೌಲಭ್ಯ ಲಭ್ಯವಾಗುತ್ತಿದ್ದರೂ ಉಪನ್ಯಾಸಕರ ಕೊರತೆ ನೀಗಿಸುವ ಆಸಕ್ತಿಯನ್ನು ಸಂಬಂಧಿಸಿದವರು ತೋರಿಸುತ್ತಿಲ್ಲ.
ಕಾಲೇಜಿನಲ್ಲಿ ತಾಲೂಕಿನ ಗ್ರಾಮೀಣ ಭಾಗದ ಬಡ ಮತ್ತು ರೈತಾಪಿ ಕುಟುಂಬದ ಶೇ 85 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕಲಾ ವಿಭಾಗದ 305 ನೋಂದಣಿ ಮಾಡಿಕೊಂಡಿದ್ದು, 227 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ 42 ವಿದ್ಯಾರ್ಥಿಗಳ ಪೈಕಿ 34, ವಿಜ್ಞಾನ ವಿಭಾಗದ 44 ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಒಟ್ಟು 391 ವಿದ್ಯಾರ್ಥಿಗಳ ಪೈಕಿ 285 ವಿದ್ಯಾರ್ಥಿಗಳು ಉತ್ತೀರ್ಣರಾದರೆ, 106 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಸದರಿ ಕಾಲೇಜು ಸುಸಜ್ಜಿತ ಕಟ್ಟಡ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಮೈದಾನ ಸೇರಿ ಹಲವು ಸೌಲಭ್ಯಗಳನ್ನು ಹೊಂದಿದೆ.
2023-24 ನೇ ಸಾಲಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ 634 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರವೇಶ ಪಡೆಯಲು ಇನ್ನೂ ಕಾಲಾವಕಾಶ ಇದೆ. ಕಾಲೇಜಿನಲ್ಲಿ 22 ಮಂಜೂರಾದ ಹುದ್ದೆಗಳ ಪೈಕಿ ಇಂಗ್ಲೀಷ್, ಇತಿಹಾಸ, ವಿಜ್ಞಾನ ವಿಭಾಗದ ತಲಾ ಒಂದು ಉಪನ್ಯಾಸಕ ಹುದ್ದೆ, ಅರ್ಥಶಾಸ್ತ್ರ ಎರಡು, ಗ್ರಂಥಪಾಲಕ ಹಾಗೂ ಪರಿಚಾರಕ ತಲಾ ಹುದ್ದೆ ಖಾಲಿ ಇವೆ. ರಾಜ್ಯಶಾಸ್ತ್ರ ವಿಭಾಗ ಆರಂಭಿಸಿ ನಾಲ್ಕು ವರ್ಷ ಕಳೆದರೂ ಇದುವರೆಗೆ ಸಂಬಂಧಿಸಿದ ವಿಷಯದ ಉಪನ್ಯಾಸಕರ ನಿಯೋಜನೆ ಮಾಡಿಲ್ಲ. ಖಾಸಗಿ ಕಾಲೇಜಿನಲ್ಲಿ ಹೆಚ್ಚಿನ ಶುಲ್ಕ ಭರಿಸಲಾಗದೆ ಸರ್ಕಾರಿ ಪಿಯು ಕಾಲೇಜಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಉಪನ್ಯಾಸಕರ ಹುದ್ದೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟು ಬೀಳುತ್ತಿದೆ.
ಪಟ್ಟಣದ ಸರ್ಕಾರಿ ಪಿಯು ಕಾಲೇಜು ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಪೀಠೋಪಕರಣ ಸೇರಿ ಅಗತ್ಯ ಮೂಲ ಸೌಕರ್ಯ ಹೊಂದಿದೆ. ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿ ಗಳು ಪ್ರವೇಶ ಪಡೆದಿದ್ದಾರೆ. ಹುದ್ದೆಗಳು ಖಾಲಿ ಇರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. 5 ಜನ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ.| ಮುರುಘೇಂದ್ರಪ್ಪ ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ, ಲಿಂಗಸುಗೂರು
ಲಿಂಗಸುಗೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಲವು ವರ್ಷಗಳಿಂದ ಉಪನ್ಯಾಸಕ ಹಾಗೂ ಸಿಬ್ಬಂದಿ ಕೊರತೆ ಇದೆ. ಇದರಿಂದ ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಸರ್ಕಾರ ಶೀಘ್ರ ಉಪನ್ಯಾಸಕರನ್ನು ನೇಮಕ ಮಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕು| ರಾಯಪ್ಪ ಗ್ರಾಪಂ ಸದಸ್ಯ, ಜಾಗೀರಹಂದಿಹಾಳ