ತಹಸೀಲ್ಧಾರ್ ಶಂಶಾಲಂಗೆ ಮನವಿ
ಲಿಂಗಸುಗೂರು: ಕರೊನಾಕ್ಕೆ ತುತ್ತಾದ ಅಂಗನವಾಡಿ ನೌಕರರ ಕುಟುಂಬಗಳಿಗೆ 30 ಲಕ್ಷ ರೂ. ಪರಿಹಾರ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ಅಂಗನವಾಡಿ ನೌಕರರ ಸಂಘ (ಸಿಐಟಿಯು ನೇತೃತ್ವ)ದ ನೌಕರರು ಒತ್ತಾಯಿಸಿದ್ದಾರೆ.
ಸಹಾಯಕ ಆಯುಕ್ತರ ಕಚೇರಿಯ ತಹಸೀಲ್ದಾರ್ ಶಂಶಾಲಂಗೆ ಶುಕ್ರವಾರ ಮನವಿ ಸಲ್ಲಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಫಾರಸು ಮಾಡಿದ 339.48 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕು. ಇಲಾಖೆಯ ಸಚಿವರಿಂದಲೇ ಕೋಳಿ ಮೊಟ್ಟೆ ಖರೀದಿಯಲ್ಲಿ ಆದ ಭ್ರಷ್ಟಾಚಾರದ ತನಿಖೆ ನಡೆಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಆರಂಭಿಸಬೇಕು. ಐಸಿಡಿಸ್ ಕೆಲಸ ಹೊರತುಪಡಿಸಿ ಉಳಿದ ಕೆಲಸಗಳನ್ನು ನಿರ್ಭಂಧಿಸಬೇಕು. 2016ರಿಂದ ನಿವೃತ್ತಿ ಹೊಂದಿದ ಸುಮಾರು 7166 ನೌಕರರಿಗೆ ಬಾಕಿ ಇರುವ ಇಡುಗಂಡು ಕೊಡಬೇಕು. 2015 ರಿಂದ ಹೊಸದಾಗಿ ನೇಮಕಗೊಂಡ ನೌಕರರಿಗೆ ಎಲ್‌ಐಸಿ ಆಧಾರಿತ ನಿವೃತ್ತಿ ಸೌಲಭ್ಯ ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ.