ಲಿಂಗಸುಗೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಶಾಸಕ ಮಾನಪ್ಪ ವಜ್ಜಲ್ ಸೋಮವಾರ ಉದ್ಘಾಟಿಸಿದರು. ಬಿಜೆಪಿ ಮುಖಂಡರಾದ ಅಯ್ಯಪ್ಪ ಮಾಳೂರು, ಹುಲ್ಲೇಶ ಸಾಹುಕಾರ, ಶರಣಪ್ಪ ಮೇಟಿ, ಗಿರಿಮಲ್ಲನಗೌಡ ಪಾಟೀಲ್, ಬಸನಗೌಡ ಮೇಟಿ ಇತರರಿದ್ದರು. 
ಜಿಲ್ಲೆ

ಉಚಿತ ಯೋಜನೆಗಳ ಜಾರಿಯಿಂದ ದಿವಾಳಿಯತ್ತ ರಾಜ್ಯ; ಶಾಸಕ ಮಾನಪ್ಪ ವಜ್ಜಲ್ ಅಸಮಾಧಾನ

ಶಾಮಸುಂದರ್ ಕೊಪ್ಪಳಕರ್

ಲಿಂಗಸುಗೂರು: ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಮಂಡಲ ಹಾಗೂ ನಾನಾ ಮೋರ್ಚಾಗಳ ಪದಾಧಿಕಾರಿಗಳು ಯಶಸ್ವಿಗೊ ಳಿಸಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಭಿಯಾನಕ್ಕೆ ಚಾಲನೆ ನೀಡಿದ್ದು, ರಾಜ್ಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಅಭಿಯಾನವು ಹದಿನೈದು ದಿನಗಳ ಕಾಲ ನಡೆಯಲಿದೆ. ಪ್ರತಿ ಬೂತ್‌ನಿಂದ 400ಕ್ಕೂ ಹೆಚ್ಚು ಸದಸ್ಯರನ್ನಾಗಿ ಮಾಡಬೇಕಿದೆ. ಪಕ್ಷದ ಮಂಡಲ ಹಾಗೂ ನಾನಾ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಗುರಿ ಸಾಧನೆಗೆ ಶ್ರಮಿಸಬೇಕು ಎಂದರು.

ನರೇಂದ್ರ ಮೋದಿ ಅವರು ದೇಶದ ಪ್ರಗತಿಗೆ ಹೆದ್ದಾರಿ, ರೈಲ್ವೆ, ನೀರಾವರಿ, ಜಲಧಾರೆ, ಜೆಜೆಎಂ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಂದು ನಾನಾ ರಾಷ್ಟ್ರಗಳು ಭಾರತದತ್ತ ಮುಖ ಮಾಡಿವೆ. ಕೇಂದ್ರದ ಜನಪರ ಆಡಳಿತವು ವಿಶ್ವ ದಾಖಲೆಯತ್ತ ಸಾಗಿದೆ. ಆದರೆ, ರಾಜ್ಯ ಸರ್ಕಾರ ಉಚಿತ ಯೋಜನೆ ಜಾರಿಗೆ ತಂದು ದಿವಾಳಿಯತ್ತ ಸಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ನೈಯಾ ಪೈಸೆ ಹಣವಿಲ್ಲದಂತಾಗಿದೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ಮುಖ ತೋರಿಸದ ಪರಿಸ್ಥಿತಿ ಉಂಟಾಗಿದೆ ಎಂದರು.

ಪಕ್ಷದ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್ ಲೆಕ್ಕಿಹಾಳ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಪಕ್ಷದ ಪ್ರತಿ ಕಾರ್ಯಕರ್ತನೂ ಹೊಸದಾಗಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕಿದೆ. ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತ ರಾಗಲು ಒಂದು ಸಾವಿರ ಸದಸ್ಯತ್ವ ಮಾಡಿಸಿದರೆ ತಾಪಂ, ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ನೆರವಾಗುತ್ತದೆ ಎಂದರು.

ಇದೇ ವೇಳೆ ಪಕ್ಷದ ನಾನಾ ಮೋರ್ಚಾಗಳ ಅಧ್ಯಕ್ಷ, ಪದಾಧಿಕಾರಿಗಳಿಗೆ ಪಕ್ಷದ ಆದೇಶ ಪತ್ರ ನೀಡಲಾಯಿತು. ತಾಲೂಕು ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಮುದಗಲ್ ಘಟಕ ಅಧ್ಯಕ್ಷ ಹುಲ್ಲೇಶ ಸಾಹುಕಾರ, ಪ್ರಮುಖರಾದ ಶರಣಪ್ಪ ಮೇಟಿ, ಗಿರಿಮಲ್ಲನಗೌಡ ಪಾಟೀಲ್, ಬಸನಗೌಡ ಮೇಟಿ, ಜೀವಲೆಪ್ಪ ನಾಯ್ಕ, ಜಗನ್ನಾಥ ಕುಲಕರ್ಣಿ, ನಾರಾಯಣೆಪ್ಪ ನಾಯ್ಕ, ಬಸನಗೌಡ ನೀರಲಕೇರಿ, ಎನ್.ಸ್ವಾಮಿ ಹಟ್ಟಿ, ಕೆ.ನಾಗಭೂಷಣ, ತಿಮ್ಮನಗೌಡ, ಸಿದ್ರಾಮಯ್ಯ, ನಿಂಗಣ್ಣ ದೇವಿಕೇರಿ, ಅನಂತದಾಸ, ಬಸಮ್ಮ ಯಾದವ್ ಸೇರಿದಂತೆ ಇತರರು ಇದ್ದರು.