ಲಿಂಗಸುಗೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ, ತಹಸೀಲ್ದಾರ್ ಶಂಶಾಲಂ ಇದ್ದರು. 
ಜಿಲ್ಲೆ

ಗ್ರಾಪಂ ಅನುದಾನದ ತನಿಖೆ ಅಗತ್ಯ

ಲಿಂಗಸುಗೂರು: ತಾಲೂಕಿನ 30 ಗ್ರಾಪಂಗಳಿಗೆ ಪ್ರತಿವರ್ಷ ಸರ್ಕಾರದಿಂದ ತಲಾ 30 ರಿಂದ 35 ಲಕ್ಷ ರೂ. ಬಿಡುಗಡೆಯಾಗುತ್ತದೆ. ಈ ಅನುದಾನ ಯಾವ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಿದೆ ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಜನವರಿಯಲ್ಲಿ ನೀಡಿರುವೆ. ಆದರೆ, ಈವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದೀರಿ, ನೀರಿನ ಸಮಸ್ಯೆ ಹೇಗೆ ನಿರ್ವಹಿಸುತ್ತೀರಿ ಎಂದು ಇಒಗೆ ಪ್ರಶ್ನಿಸಿದರು. ಆಗ ತಾಪಂ ಇಒ ಉಮೇಶ ಕುಡಿವ ನೀರಿಗಾಗಿ ಪ್ರತ್ಯೇಕ ಅನುದಾನವಿಲ್ಲ. ಗ್ರಾಪಂಗೆ ಪ್ರತಿವರ್ಷ ಬರುವ ಅನುದಾನದಲ್ಲಿ ಕುಡಿವ ನೀರಿನ ಸಮಸ್ಯೆ ನಿಭಾಯಿಸಲಾಗುತ್ತಿದೆ ಎಂದು ಉತ್ತರಿಸಿದಾಗ, ಪ್ರತಿವರ್ಷ ಪ್ರತಿ ಗ್ರಾಪಂಗೆ ಎಷ್ಟು ಹಣ ಬರುತ್ತದೆ. ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ಆಗ ನಿಜಾಂಶ ಗೊತ್ತಾಗಲಿದೆ ಎಂದು ವಜ್ಜಲ್ ತಿಳಿಸಿದರು.

ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಹನುಮಂತಪ್ಪ ಮಾತನಾಡಿ, ಮೂರು ಹಂತದ ಒಟ್ಟು 230 ಜೆಜೆಎಂ ಕಾಮಗಾರಿಗಳ ಪೈಕಿ 71 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದವು ಪ್ರಗತಿಯಲ್ಲಿವೆ. 20 ಕಾಮಗಾರಿಗಳು 20 ಮನೆಗಳಿಗಿಂತ ಕಡಿಮೆ ಇರುವ ಕಾರಣ ಯೋಜನೆಯಿಂದ ಕೈಬಿಡಲಾಗಿದೆ. ಈ ಕಾಮಗಾರಿಗೆ 800 ಕೋಟಿ ರೂ. ಅನುದಾನದ ಪೈಕಿ ಈಗಾಗಲೇ 560 ಕೋಟಿ ರೂ. ಪಾವತಿಸಲಾಗಿದೆ ಎಂದು ಉತ್ತರಿಸಿದರು. ಆಗ ಶಾಸಕ ವಜ್ಜಲ್ ಮಧ್ಯಪ್ರವೇಶಿಸಿ, ಕಾಮಗಾರಿ ಕಳಪೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದ ಸದನ ಸಮಿತಿ ಭೇಟಿ ನೀಡಿ ಬಿಲ್ ಮಾಡದಂತೆ ಸೂಚಿಸಿದರೂ ಹಣ ಯಾರನ್ನು ಕೇಳಿ ಪಾವತಿಸಿದ್ದೀರಿ. ಸದನ ಸಮಿತಿಗೆ ಬೆಲೆ ಇಲ್ಲವೆ?. ಇದರ ಪರಿಣಾಮ ನೀವೇ ಎದುರಿಸಬೇಕಾಗಲಿದೆ ಎಂದು ಹರಿಹಾಯ್ದರು. ಮೇಲಧಿಕಾರಿಗಳ ಸೂಚನೆಯಂತೆ ಪಾವತಿಸಲಾಗಿದೆ ಎಂದು ಎಇಇ ಪ್ರತಿಕ್ರಿಯಿಸಿದರು. ಪಾವತಿಸಿದ ಅಧಿಕಾರಿಗಳು ಅಮಾನತು ಆಗಲಿದ್ದಾರೆ ಎಂದ ಶಾಸಕರು, ಹಳ್ಳಿಗಳಲ್ಲಿ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸಿ ಹಾಗೆಯೇ ಬಿಡಲಾಗಿದೆ. ಮರಳಿ ಸಿಸಿ ರಸ್ತೆ ನಿರ್ಮಿಸಬೇಕೆಂದು ಸೂಚಿಸಿದರು.

ಅತಿಥಿ ಶಿಕ್ಷಕರಿಗೆ ಮೂರ‌್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡಿದರೆ ಕುಟುಂಬ ನಿರ್ವಹಣೆ ಕಷ್ಟ. ಪ್ರತಿ ತಿಂಗಳು ವೇತನ ಪಾವತಿಸಬೇಕೆಂದು ಬಿಇಒ ಹುಂಬಣ್ಣ ರಾಠೋಡ್‌ಅವರಿಗೆ ಶಾಸಕ ವಜ್ಜಲ್ ತಾಕೀತು ಮಾಡಿದರು.

ಅಕ್ರಮ ಸಕ್ರಮದಡಿ 1200 ಅರ್ಜಿಗಳ ಪೈಕಿ ಐದು ಮಾತ್ರ ಅರ್ಹತೆ ಹೊಂದಿವೆ. ಉಳಿದವು ತಿರಸ್ಕೃತಗೊಂಡರೆ ರೈತರು ದಂಗೆ ಏಳಲಿದ್ದಾರೆ. ಬಗರ್ ಹುಕುಂ ಸಾಗುವಳಿದಾರರು ಹಲವು ದಶಕಗಳಿಂದ ಉಳುಮೆ ಮಾಡುತ್ತಿದ್ದು, ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಿ ಸಸಿ ನೆಡವುದು ಸರಿಯಲ್ಲ ಎಂದ ವಜ್ಜಲ್, ಪ್ರತಿವರ್ಷ ರಸ್ತೆ ಅಕ್ಕಪಕ್ಕ ಸಸಿ ನೆಟ್ಟರೆ ಸಾಲದು ಸಂರಕ್ಷಿಸಬೇಕು. ಹೆದ್ದಾರಿ ರಸ್ತೆಗಳ ಗಡಿ ರೇಖೆಯಲ್ಲಿ ಸಸಿಗಳನ್ನು ನೆಟ್ಟರೆ ವಿಸ್ತರಣೆ ವೇಳೆ ಗಿಡ ಮರಗಳು ನಾಶವಾಗುವುದಿಲ್ಲ ಎಂದರು.

ಎಂಎಲ್‌ಎ-ಸದಸ್ಯರ ಮಧ್ಯೆ ವಾಗ್ವಾದ

ಛತ್ತರ ಆಂಜನೆಯ ದೇವಸ್ಥಾನ, ರಾಮಜೀನಾಯ್ಕ ತಾಂಡಾ, ತೊಡಗಿ ಸೇರಿದಂತೆ ಅನೇಕ ಕಡೆ ಕೆಆರ್‌ಐಡಿಎಲ್‌ನಿಂದ ಕಳಪೆ ಕಾಮಗಾರಿಗಳು ನಡೆದಿವೆ. ಈ ಬಗ್ಗೆ ತನಿಖಾ ತಂಡ ರಚಿಸಬೇಕೆಂದು ತಾಪಂ ಕೆಡಿಪಿ ನಾಮನಿರ್ದೇಶನ ಸದಸ್ಯರಾದ ರಾಘವೇಂದ್ರ ಕುರಡಿ, ಪರಮೇಶ ಕನ್ನಾಪುರಟ್ಟಿ ಪಟ್ಟು ಹಿಡಿದರು. ಶಾಸಕ ವಜ್ಜಲ್ ಪ್ರತಿಕ್ರಿಯಿಸಿ, ಕಳಪೆ ಕಾಮಗಾರಿಗಳ ಬಗ್ಗೆ ದೂರುಗಳು ಬಂದಿವೆ. ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಆಗ ಕೆಡಿಪಿ ಸದಸ್ಯರು, ನೀವು ಖುದ್ದಾಗಿ ಭೇಟಿ ನೀಡುವುದು ಬೇಡ, ನೀವೇನಾದರೂ ಶಾಮೀಲಾಗಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ಶಾಸಕ- ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಕೆಡಿಪಿ ಸದಸ್ಯರು ಇತಿಮಿತಿ ಕಾಯ್ದುಕೊಳ್ಳಬೇಕು. ನಿಮಗೆ ಪ್ರಶ್ನೆ ಕೇಳಲು ಮತ್ತು ಸಮಸ್ಯೆ ಗಳನ್ನು ಪ್ರಸ್ತಾಪಿಸುವ ಅಧಿಕಾರವಿದೆ. ಪ್ರತಿ ವಿಷಯಕ್ಕೂ ಏರುಧ್ವನಿಯಲ್ಲಿ ಮೂಗು ತೂರಿಸುವುದು ಸರಿಯಲ್ಲ. ನಯ-ವಿನಯ ಕಾಪಾಡಿಕೊಂಡು ನಿಮ್ಮ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ವಜ್ಜಲ್ ತಿಳಿಸಿದರು. ನೀವು ನಮ್ಮ ಹಕ್ಕು ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದೀರೆಂದು ಕೆಡಿಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.