ಶ್ರೀ ಅಮರೇಶ್ವರ ಜಾತ್ರೆ ಪ್ರಯುಕ್ತ ಮಹಾರಥ ಸ್ವಚ್ಛತೆ ಮತ್ತು ಗ್ರೀಸಿಂಗ್ ಮಾಡಿರುವುದು. 
ಜಿಲ್ಲೆ

ಶ್ರೀ ಅಮರೇಶ್ವರ ಜಾತ್ರೋತ್ಸವಕ್ಕೆ ಭರದ ತಯಾರಿ

ಲಿಂಗಸುಗೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಗುರುಗುಂಟಾ ಅಮರೇಶ್ವರ ದೇವರ ಜಾತ್ರೋತ್ಸವಕ್ಕೆ ತಾಲೂಕು ಆಡಳಿತ ಭರದ ಸಿದ್ಧತೆಯಲ್ಲಿ ತೊಡಗಿದ್ದು, ಮಾ.14 ರಂದು ಜರುಗುವ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.

ಜಾತ್ರೆ ನಿಮಿತ್ತ ವಸತಿ ಮನೆಗಳ ಹೊರತುಪಡಿಸಿ, ಈಗಾಗಲೇ ಗರ್ಭಗುಡಿ, ದ್ವಾರಬಾಗಿಲಿಗೆ ಆಯಿಲ್ ಪೇಂಟಿಂಗ್ ಮತ್ತು ಆದಯ್ಯನ ಗುಡಿ, ಗುರುಮಠ, ಆಂಜನೇಯ, ವೀರಭದ್ರ, ಹಿರಿಯಣ್ಣನ ಗುಡಿಗಳು, ಕಪಿಲಪ್ಪ ಮಹಡಿ, ಮೆಟ್ಟಮರಡಿ ಕಟ್ಟೆ, ಬಸವಣ್ಣ ಕಟ್ಟೆ, ಗುಂತಗೋಳ, ಯರಡೋಣ, ಹೊನ್ನಳ್ಳಿಯ ಕಳಸದಗುಡಿಗಳಿಗೆ ಸುಣ್ಣಬಣ್ಣ ಬಳಿಯಲಾಗುತ್ತಿದೆ. ದೇವಸ್ಥಾನ ದ್ವಾರಬಾಗಿಲು ಮತ್ತು ಸುಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.

ಮಹಾರಥ ಮತ್ತು ಉತ್ಸವ ರಥ ಸ್ವಚ್ಛತೆ ಮತ್ತು ಗ್ರೀಸಿಂಗ್ ಮಾಡಲಾಗುತ್ತಿದೆ. ಜಾತ್ರೆಗೆ ಬರುವ ನಾಟಕ ಕಂಪನಿಗಳು, ವಿವಿಧ ವ್ಯಾಪಾರ ಅಂಗಡಿಗಳಿಗೆ ಜಾಗ ಗುರುತಿಸಿ ಹರಾಜು ನಡೆದಿದೆ. ಮಾ.14 ರಿಂದ ಒಂದು ತಿಂಗಳ ಕಾಲ ತೆಂಗಿನಕಾಯಿ ಮಾರಾಟಕ್ಕೆ 16 ಲಕ್ಷ ರೂ., ನಾಲ್ಕು ದಿನಗಳವರೆಗೆ ವಾಹನ ಪಾರ್ಕಿಂಗ್‌ಗೆ 45 ಸಾವಿರ ರೂ., ಲಾಡು ಮತ್ತು ಪ್ರಸಾದ ಮಾರಾಟಕ್ಕೆ 95 ಸಾವಿರ ರೂ., ತೆಂಗಿನಕಾಯಿ ಟಿಕೆಟ್‌ಗೆ 95 ಲಕ್ಷ ರೂ. ಹಾಗೂ ನಾಟಕ ಕಂಪನಿಗಳಿಗೆ ಜಾಗ-2ಕ್ಕೆ 2 ಲಕ್ಷ ರೂ., ಜಾಗ-3 ಕ್ಕೆ 1.80 ಲಕ್ಷ ರೂ., ಮಕ್ಕಳ ಮನರಂಜನೆಯ ಜೋಕಾಲಿಗೆ 1 ಲಕ್ಷ ರೂ. ಮತ್ತು ವಿದ್ಯುತ್ ದೀಪಗಳ ಅಳವಡಿಕೆಗೆ 1.21 ಲಕ್ಷ ರೂ. ಟೆಂಡರ್ ನೀಡಲಾಗಿದೆ.

ಭಕ್ತರಿಗಾಗಿ ಕುಡಿವ ನೀರು, ತಾತ್ಕಾಲಿಕ ಆಸ್ಪತ್ರೆ, ಪೊಲೀಸ್ ಠಾಣೆ, ಸಿಸಿ ಕ್ಯಾಮರಾ, ಬಸ್ ನಿಲ್ದಾಣ, ಖಾಸಗಿ ವಾಹನಗಳ ಪಾರ್ಕಿಂಗ್ ಮತ್ತು ವಿಶೇಷವಾಗಿ ಜಾನುವಾರು ಜಾತ್ರೆಗೆ ಮಾರುಕಟ್ಟೆ ವ್ಯವಸ್ಥೆಯ ಎಲ್ಲ ಸಿದ್ಧತೆಗಳು ನಡೆದಿವೆ. ಮಹಾರಥೋತ್ಸವ ವೇಳೆ ನೂಕು ನುಗ್ಗಲು ಉಂಟಾಗದಂತೆ ಮತ್ತು ಕಳ್ಳತನ, ಇತರ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.

ಸುಕ್ಷೇತ್ರ ಅಮರೇಶ್ವರ ಜಾತ್ರೋತ್ಸವ ಸುಸೂತ್ರ ವಾಗಿ ನಡೆಸಲು ತಾಲೂಕು ಆಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಗರ್ಭಗುಡಿ ಆದಿಯಾಗಿ ಎಲ್ಲ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯಲಾಗಿದೆ. ಜಾತ್ರೆಯಲ್ಲಿ ಯಾವುದೇ ಕೊರತೆಯಾಗದಂತೆ ಮೂಲ ಸೌಕರ್ಯ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. | ಡಾ.ಮಲ್ಲಪ್ಪ ಯರಗೋಳ ತಹಸೀಲ್ದಾರ್, ಅಮರೇಶ್ವರ ದೇವಸ್ಥಾನದ ಇಒ