ಲಿಂಗಸುಗೂರು ಸಮೀಪದ ಯರಡೋಣ ಕ್ರಾಸ್‌ನ ಸಿದ್ಧರಾಮೇಶ್ವರ ಗುರುಮಠದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶ್ರೀಮಠದ ಮುರುಘೇಂದ್ರ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಮುಖ್ಯವೈದ್ಯಾಧಿಕಾರಿ ರುದ್ರಗೌಡ ಪಾಟೀಲ್ ಇತರರಿದ್ದರು. 
ಜಿಲ್ಲೆ

ಉಚಿತ ಆರೋಗ್ಯಕ್ಕೆ ಶಿಬಿರಕ್ಕೆ ಚಾಲನೆ

ಶ್ರೀನಾಥ

ಲಿಂಗಸುಗೂರು: ತಾಲೂಕಿನ ಯರಡೋಣ ಕ್ರಾಸ್‌ನ ಸಿದ್ಧರಾಮೇಶ್ವರ ಗುರುಮಠದ ದಾಸೋಹ ಭವನ ಉದ್ಘಾಟನೆ ಹಾಗೂ ಮುರುಘೇಂದ್ರ ಶಿವಯೋಗಿಗಳ 33 ನೇ ಗುರುವಂದನಾ ಕಾರ್ಯಕ್ರಮ ಪ್ರಯುಕ್ತ ಶ್ರೀ ಮಠದಲ್ಲಿ ಬುಧವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಬೆಳಗ್ಗೆ 10 ರಿಂದ 2 ಗಂಟೆವರೆಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದೇಹಿ ಆಸ್ಪತ್ರೆಯ ಕೆ.ಮಲ್ಲಿಕಾರ್ಜುನ ಹಚ್ಚೊಳ್ಳಿ, ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ್, ವೈದ್ಯರಾದ ವಸಂತಕುಮಾರ ಹುಡೇದಮನಿ, ಶ್ವೇತಾ ಕೆ.ನಡುವಿನಮನಿ, ಉಮಾಮಹೇಶ್ವರಿ, ಸಂಜಯರಡ್ಡಿ ಹಾಗೂ ಸಿಬ್ಬಂದಿ ವರ್ಗ ಹೃದಯ ಸಂಬಂಧಿ ಕಾಯಿಲೆ, ನರರೋಗ ಸಮಸ್ಯೆ, ಎಲುಬು-ಕೀಲುಗಳ ತೊಂದರೆ, ಕಣ್ಣಿನ ತೊಂದರೆ, ಕಿಡ್ನಿಯಲ್ಲಿ ಕಲ್ಲು, ಕ್ಯಾನ್ಸರ್ ತೊಂದರೆ ಸೇರಿ ಇತರೆ ಕಾಯಿಲೆಗಳ ತಪಾಸಣೆ ನಡೆಸಿದರು.

ಇಂದು (ಮೇ 22) ಮುಂಡರಗಿಯ ಡಾ.ಅನ್ನದಾನೇಶ್ವರ ಶಿವಯೋಗಿಗಳ ಸಾನ್ನಿಧ್ಯ ಮತ್ತು ದೊಡ್ಡನಹಳ್ಳಿ ಗವಿಮಠದ ಗುರುಶಾಂತ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುವ ದಾಸೋಹ ಭವನ ಉದ್ಘಾಟನೆ ನಿಮಿತ್ತ 63 ಗುರು ಜಂಗಮರ ಪಾದಪೂಜೆ ಹಾಗೂ ಸಂಜೆ 6 ಗಂಟೆಗೆ ಶ್ರೀಮಠದ ಮುರುಘೇಂದ್ರ ಶಿವಯೋಗಿಗಳ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ಅಂದು ಸಂಜೆ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಷಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ.