ಲಿಂಗಸುಗೂರಿನಲ್ಲಿ ಹಿಂದುಪರ ಸಂಘಟನೆಗಳು ಮತ್ತು ಮಾಜಿ ಸೈನಿಕರಿಂದ ಪಂಜಿನ ಮೆರವಣಿಗೆ ನಡೆಯಿತು. ಪ್ರಮುಖರಾದ ಈಶ್ವರ ವಜ್ಜಲ್, ಶರಣಬಸವ ಮೇಟಿ, ಅಯ್ಯಪ್ಪ ವಕೀಲ, ಚನ್ನಬಸವ ಹಿರೇಮಠ, ಸಿದ್ದು ಬಡಿಗೇರ ಇತರರಿದ್ದರು. 
ಜಿಲ್ಲೆ

ಭಯೋತ್ಪಾದಕರಿಗೆ ನೀಡಲಿ ದಿಟ್ಟ ಉತ್ತರ

ಶಾಮಸುಂದರ್ ಕೊಪ್ಪಳಕರ್

ಲಿಂಗಸುಗೂರು: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ಪಟ್ಟಣದಲ್ಲಿ ಗುರುವಾರ ಸಂಜೆ ಹಿಂದುಪರ ಸಂಘಟನೆಗಳು ಹಾಗೂ ಮಾಜಿ ಸೈನಿಕರಿಂದ ಪಂಜಿನ ಮೆರವಣಿಗೆ ನಡೆಸಿ ಪಾಕಿಸ್ತಾನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಲಾಯಿತು.

ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಿಂದ ಬಸ್ ನಿಲ್ದಾಣ ವೃತ್ತ, ದೊಡ್ಡ ಹನುಮಂತ ದೇವಸ್ಥಾನದಿಂದ ಗಡಿಯಾರ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ ಹತ್ಯೆಗೀಡಾದ ಹಿಂದುಗಳಿಗೆ ಒಂದು ನಿಮಿಷ ಮೌನಾಚರಣೆ ಕೈಗೊಂಡು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು ಮಾತನಾಡಿ, ಭಾರತ ತನ್ನದೇ ಪರಂಪರೆ, ಸಂಸ್ಕೃತಿ, ಆಚರಣೆ ಜತೆಗೆ ವಿವಿಧತೆಯಲ್ಲಿ ಏಕತೆ ಹೊಂದಿದೆ. ಹಿಂದು, ಮುಸ್ಲಿಂ, ಸಿಖ್, ಬೌದ್ಧ, ಜೈನ ಸೇರಿದಂತೆ ಅನೇಕ ಧರ್ಮೀಯರು ಸೌಹಾರ್ದಯುತವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕೆಲ ವರ್ಷಗಳಿಂದ ನೆರೆಯ ಪಾಕಿಸ್ತಾನದ ಉಗ್ರಗಾಮಿಗಳ ದುಷ್ಕೃತ್ಯಕ್ಕೆ ಸರ್ಕಾರ ಕಡಿವಾಣ ಹಾಕಿತ್ತು. ಇದರಿಂದ ಶಾಂತಿ, ಸೌಹಾರ್ದ ನೆಲೆಸಿತ್ತು. ಆದರೆ, ಇತ್ತೀಚೆಗೆ ಕಾಶ್ಮೀರ ಕಣಿವೆಯ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಅಮಾಯಕರ ಹತ್ಯೆಗೈದಿರುವುದು ಖಂಡನೀಯ. ಈ ಹಿಂದೆ ಪುಲ್ವಾಮಾ ಸೇರಿ ಇತರ ದಾಳಿಗಳು ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಉತ್ತರ ನೀಡಿದ್ದಾರೆ. ಈಗಲೂ ಕೂಡ ಸೂಕ್ತ ನಿರ್ಧಾರ ಕೈಗೊಂಡು ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತೆಸೆಯಬೇಕು. ಅಂದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದರು.

ಪ್ರಮುಖರಾದ ಭೀಮಸೇನರಾವ್ ಕುಲಕರ್ಣಿ, ಅನಂತ ದಾಸ, ರಾಜು ಹಿರೇಮಠ, ಸುಭಾಷ್ ಪಲ್ಲೇದ, ವಿರೂಪಾಕ್ಷಯ್ಯ ಹಿರೇಮಠ, ಪರಶುರಾಮ ಕೆಂಭಾವಿ, ರಾಜು ತಂಬಾಕೆ, ಭೀಮಣ್ಣ ಹಿರೇಮನಿ ಇತರರಿದ್ದರು.