ಲಿಂಗಸುಗೂರು: ದೇಶ ಕಂಡ ಅಪ್ರತಿಮ ರಾಷ್ಟ್ರಭಕ್ತ ಮಹಾರಾಣಾ ಪ್ರತಾಪಸಿಂಹ ಅವರ ಶೌರ್ಯ, ಪರಾಕ್ರಮ ಯುವಕರಿಗೆ ಆದರ್ಶ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ರಜಪೂತ್ ಸಾಂಸ್ಕೃತಿಕ ಭವನದಲ್ಲಿ ರಜಪೂತ್ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾರಾಣಾ ಪ್ರತಾಪಸಿಂಹ ಸ್ವಾತಂತ್ರೃ ಸಂಗ್ರಾಮದ ಕಹಳೆ ಊದಿದ ಮಹಾನ್ ಶೂರ. ರಾಷ್ಟ್ರ ಮತ್ತು ಹಿಂದುಗಳ ರಕ್ಷಣೆಯಲ್ಲಿ ಅವರ ಕೊಡುಗೆ, ಶ್ರಮದಾನ ಅಪಾರ. ಇಂಥ ಪರಾಕ್ರಮಿಯ ಜಯಂತಿ ಆಚರಣೆ ರಜಪೂತ್ ಸಮಾಜಕ್ಕೆ ಕಿರೀಟಪ್ರಾಯವಾಗಿದೆ ಎಂದರು.
ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಮೇವಾರದ ರಜಪೂತ ರಾಜನಾಗಿದ್ದ ಮಹಾರಾಣಾ ಪ್ರತಾಪಸಿಂಹ ಹಲ್ದಿಘಾಟಿ ಯುದ್ಧದಲ್ಲಿ ಮೊಘಲರ ರಾಜ ಅಕ್ಬರನ ಜತೆ ಹೋರಾಡಿದ ಮಹಾನ್ ಪರಾಕ್ರಮಶಾಲಿ.
ಮೊಘಲ್ ದೊರೆಗಳ ಜತೆ ಯಾವುದೇ ರಾಜಿ-ಸಂಧಾನ ಮಾಡಿಕೊಳ್ಳದೆ ಸ್ವಾಭಿಮಾನದಿಂದ ಆಳ್ವಿಕೆ ಮಾಡಿದ ಅವರ ತತ್ವಾದರ್ಶ, ರಾಷ್ಟ್ರ ಪ್ರೇಮ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಸರ್ಕಾರಿ ಸೇವೆಗೆ ಸೇರಿದ ನೌಕರರು ಮತ್ತು ನಿವೃತ್ತ ನೌಕರರನ್ನು ಗೌರವಿಸಲಾಯಿತು.
ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ರಜಪೂತ್ ಸಮಾಜದ ತಾಲೂಕು ಅಧ್ಯಕ್ಷ ಸುಧೀರಕುಮಾರ ಶ್ರೀವಾತ್ಸವ, ಉಪಾಧ್ಯಕ್ಷ ಸುಭಾಷಸಿಂಗ್, ಪ್ರಧಾನ ಕಾರ್ಯದರ್ಶಿ ದುರ್ಗಾಸಿಂಗ್, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಪ್ರಮುಖರಾದ ಸೋಮಶೇಖರ ಐದನಾಳ, ವೆಂಕನಗೌಡ ಪಾಟೀಲ್, ರಾಜೇಂದ್ರಸಿಂಗ್ ಹಜೇರಿ, ಶಿವರಾಜಸಿಂಗ್, ಮೋಹನಸಿಂಗ್, ದಶರಥಸಿಂಗ್, ರೇಖಾಬಾಯಿ ಇತರರಿದ್ದರು.