ಲಿಂಗಸುಗೂರು: ಪಟ್ಟಣಕ್ಕೆ 200 ಹಾಸಿಗೆ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಗುರುವಾರ ವಿಧಾನಸಭೆ ಕಲಾಪದಲ್ಲಿ ಕೈ ಮುಗಿದು ಕೇಳಿದರೂ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಕರುಣೆ ತೋರಲಿಲ್ಲ.
ಲಿಂಗಸುಗೂರು 100 ಬೆಡ್ ಆಸ್ಪತ್ರೆಯನ್ನು 200ಕ್ಕೆ ಹೆಚ್ಚಿಸಿ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶಿಸಿತ್ತು. ಇದರಿಂದ ತಾಲೂಕಿನ ಜನ ಸಂಭ್ರಮಿಸಿದ್ದರು. ಆದರೆ, 200 ಬೆಡ್ ಆಸ್ಪತ್ರೆ ಸಿಂಧನೂರಿಗೆ ವರ್ಗಾಯಿಸಿದ್ದು ಸರಿಯಲ್ಲ. ಲಿಂಗಸುಗೂರು ತಾಲೂಕು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಲ್ಲಿನ ಜನರ ಬೇಡಿಕೆಯಾಗಿರುವ 200 ಆಸ್ಪತ್ರೆಯನ್ನು ಯಾವುದೇ ಕಾರಣ ನೀಡಿ ಕೈ ಬಿಡುವುದು ಸರಿಯಲ್ಲ. ಕೈ ಮುಗಿದು ಕೇಳಿಕೊಳ್ಳುತ್ತೇನೆ, 200 ಬೆಡ್ ಆಸ್ಪತ್ರೆ ನೀಡಬೇಕೆಂದು ಕೋರಿದರು.
ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಒಮ್ಮೆ ಕೊಟ್ಟಿದ್ದನ್ನು ವಾಪಸ್ ಪಡೆದಾಗ ಲಿಂಗಸುಗೂರಿನ ಜನತೆಗೆ ಖಂಡಿತ ನೋವಾಗಿರುತ್ತದೆ. ಲಿಂಗಸುಗೂರಿನಲ್ಲಿ ಈಗಾಗಲೇ 100 ಬೆಡ್ ಆಸ್ಪತ್ರೆ ಇದೆ. ತಾಯಿ ಮಕ್ಕಳ 100 ಬೆಡ್ ಆಸ್ಪತ್ರೆ ಇದೆ. ಈಗ ಮತ್ತೊಂದು 50 ಬೆಡ್ ಆಸ್ಪತ್ರೆ ಮಂಜೂರು ಮಾಡಿ ಅನುಮೋದನೆ ಕೊಡಲಾಗಿದೆ. ಒಟ್ಟು 250 ಬೆಡ್ ಆಸ್ಪತ್ರೆಯಾಗುತ್ತದೆ ಎಂದು ಹೇಳಿದರು.
ಸಚಿವರ ಮಾತನ್ನು ಒಪ್ಪದ ಶಾಸಕ ವಜ್ಜಲ್, ತಾಯಿ ಮಕ್ಕಳ ಆಸ್ಪತ್ರೆಯೇ ಬೇರೆ, ನಾವು ಕೇಳುವ ಆಸ್ಪತ್ರೆಯೇ ಬೇರೆ. ಅದಕ್ಕೂ ಇದಕ್ಕೂ ಹೋಲಿಸುವುದು ಬೇಡ. ಪ್ರತಿನಿತ್ಯ 800 ರಿಂದ 900 ಹೊರ ರೋಗಿಗಳು ಬರುತ್ತಾರೆ. ಮೊದಲು ಮಂಜೂರಾತಿ ನೀಡಿದ್ದ 200 ಬೆಡ್ ಆಸ್ಪತ್ರೆಗೆ ಮಂಜೂರಾತಿ ನೀಡಬೇಕು. 50 ಬೆಡ್ ಆಸ್ಪತ್ರೆ ಬೇಡ ಎಂದು ಪಟ್ಟು ಹಿಡಿದರೂ ಫಲ ಸಿಗಲಿಲ್ಲ.