ಲಿಂಗಸುಗೂರು: ತಾಲೂಕಿನಾದ್ಯಂತ ನಾಗಚತುರ್ಥಿಯನ್ನು ಸಡಗರ, ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.
ಪಟ್ಟಣದ ಮಹಾಲಕ್ಷ್ಮೀ, ಈಶ್ವರ, ನಗರೇಶ್ವರ, ದೊಡ್ಡ ಹನುಮಂತ, ಯಲ್ಲಮ್ಮ ದೇವಿ ಸೇವಿ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ ನಾಗದೇವತೆಯ ಮೂರ್ತಿಗಳಿಗೆ, ಕೆಲವೆಡೆ ಹುತ್ತಗಳಿಗೆ ಮಹಿಳೆಯರು, ಮಕ್ಕಳು ಬೆಲ್ಲದ ಹಾಲನ್ನು ಎರೆದರು. ಜೋಳ, ಮೆಕ್ಕೆಜೋಳದಿಂದ ತಯಾರಿಸಿದ ಅರಳು, ಹೆಸರು, ಎಳ್ಳು, ನವಣೆ, ಸಜ್ಜೆ, ಪುಟಾಣಿಗಳಿಂದ ತಯಾರಿಸಿ ಉಂಡಿ, ಗೋದಿ ಹುಗ್ಗಿ, ಕಡಲೆ ಕಾಳಿನ ತಿನಿಸುಗಳನ್ನು ಮಡಿಯಿಂದ ತಯಾರಿಸಿ ತಂದು ನಾಗದೇವತೆಗೆ ನೈವೇದ್ಯ ಸಮರ್ಪಿಸಿದರು. ಶುಕ್ರವಾರ ನಾಗಪಂಚಮಿ ಇದ್ದು, ಕೊಬ್ಬರಿ ಬಟ್ಟಲಿನಲ್ಲಿ ಹಸುವಿನ ಹಾಲು ಎರೆದು ಭಕ್ತ ಸಮರ್ಪಿಸುವರು.
ಜೋಕಾಲಿ ಕಟ್ಟಿ ಯುವಕರು ಆಡುವುದನ್ನು ಆರಂಭಿಸಿದ್ದು, ಮಹಿಳೆಯರು ಜಾನಪದ ಹಾಡುಗಳನ್ನು ಪರಸ್ಪರ ಸವಾಲು ಹಾಕಿ ಹಾಡುವುದು, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು, ಜೂಜು ಮೊದಲಾದ ಪ್ರಕ್ರಿಯೆಗಳು ನಡೆಯುತ್ತಿವೆ.