ಲಿಂಗಸುಗೂರು: ಅನಿರ್ದಿಷ್ಟ ಮುಷ್ಕರದ ಮಧ್ಯೆಯೂ ಲಿಂಗಸುಗೂರು ಸಾರಿಗೆ ಘಟಕದಿಂದ 33 ಮಾರ್ಗಗಳಿಗೆ ಶನಿವಾರ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರು ಕೊಂಚ ನಿಟ್ಟುಸಿರು ಬಿಟ್ಟರು.
6ನೇ ವೇತನ ಆಯೋಗದ ಶಿಪಾರಸ್ಸು ಜಾರಿಗೊಳಿಸಬೇಕೆಂಬ ಬೇಡಿಕೆ ಮುಂದಿಟ್ಟು ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆ 10 ದಿನಗಳಿಂದ ಮುಷ್ಕರ ನಡೆಸುತ್ತಿದೆ. ಇದರಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
ಸ್ಥಳೀಯ ಸಾರಿಗೆ ಘಟಕದಿಂದ ಸುರುಪುರ, ಕರ್ನೂಲ್, ಮುದ್ದೇಬಿಹಾಳ, ರಾಯಚೂರು, ಗಂಗಾವತಿ, ಬಾಗಲಕೋಟೆ ಸೇರಿದಂತೆ ಇತರೆ ಮಾರ್ಗಗಳಿಗೆ 33 ಬಸ್‌ಗಳು ಸಂಚಾರ ಆರಂಭಗೊಂಡವು. ಇತರೆ ಘಟಕಗಳಿಂದಲೂ ಸಾರಿಗೆ ಬಸ್‌ಗಳು ಆರಂಭಗೊಂಡಿವೆ.
ವಜ್ಜಲ್ ಮನವೊಲಿಕೆ: 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ, ಸಹಕಾರ ನೀಡುವಂತೆ ಸ್ಥಳೀಯ ಸಾರಿಗೆ ಘಟಕದ ನೌಕರರು ಹಟ್ಟಿ ಚಿನ್ನದಗಣಿ ಕಂಪನಿ ಅಧ್ಯಕ್ಷ ಮಾಜಪ್ಪ ವಜ್ಜಲರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮಾತುಕತೆ ಮೂಲಕ ಬೇಡಿಕೆ ಈಡೇರಿಸಿಕೊಳ್ಳೋಣ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವಂತೆ ವಜ್ಜಲ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ 66 ನೌಕರರು ಶನಿವಾರದಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
7 ನೌಕರರ ವಿರುದ್ಧ ಪ್ರಕರಣ ದಾಖಲು: ಮುಷ್ಕರದ ಮಧ್ಯೆಯೂ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿ ಸಾರಿಗೆ ಬಸ್ ಸಂಚಾರ ಆರಂಭಿಸಿದ ವೇಳೆ ಕರ್ತವ್ಯ ನಿರತ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದ ಏಳು ನೌಕರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹಮೀದ್ ಎಂಬ ಚಾಲಕ ಕರ್ತವ್ಯಕ್ಕೆ ಹಾಜರಾದ ವೇಳೆ ಆತನಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮುಷ್ಕರ ನಿರತ ನೌಕರರಾದ ಮಹಾಲಿಂಗಪ್ಪ, ಶರಣಬಸವ ಇವರನ್ನು ಅಮಾನತು ಮಾಡಲಾಗಿದೆ. ಜಗದೀಶ ಮತ್ತು ಗುಂಡಪ್ಪ ಎಂಬ ನೌಕರರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಸಾರಿಗೆ ಘಟಕ ವ್ಯವಸ್ಥಾಪಕ ಆದಪ್ಪ ಕುಂಬಾರ ತಿಳಿಸಿದ್ದಾರೆ.