ಜಿಲ್ಲೆ

ಲಿಂಗರಾಜರ ಬದುಕು ಮನುಕುಲಕ್ಕೆ ಮಾದರಿ

ರವಿ ಎಸ್. ಬಳೂಟಗಿ

ನರೇಗಲ್ಲ: ತಮ್ಮದೆನ್ನುವ ಎಲ್ಲವನ್ನೂ ಸಮಾಜದ ಉದ್ಧಾರಕ್ಕೆ ಧಾರೆಯೆರೆದವರು ಶಿರಸಂಗಿಯ ಲಿಂಗರಾಜ ದೇಸಾಯಿಯವರು. ಅವರದು ಆದರ್ಶಮಯ ಜೀವನ. ಅವರ ಬದುಕು ಮಾನವ ಕುಲಕ್ಕೆ ಮಾದರಿಯಾಗಿದೆ ಎಂದು ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ಜರುಗಿದ ಸಿದ್ಧರಾಮೇಶ್ವರ ಹಾಗೂ ಶಿರಸಂಗಿ ಲಿಂಗರಾಜರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಶಿರಸಂಗಿಯ ಸಂಸ್ಥಾನ ದಾನಕ್ಕೆ ಹೆಸರಾಗಿತ್ತು. ಹಾಲಕೆರೆ ಮಠಕ್ಕೂ ಲಿಂಗರಾಜರಿಗೂ ಅವಿನಾಭಾವ ಸಂಬಂಧ ಇತ್ತು ಎಂದರು.

ಶಾಸಕ ಜಿ.ಎಸ್. ಪಾಟೀಲ, ಇಲ್ಲಿನ ಯುವಕರು ಸಮುದಾಯ ಭವನ, ಹಾಸ್ಟೆಲ್ ಕಟ್ಟಿದರೆ ನನ್ನ ಬೆಂಬಲ ಇರುತ್ತದೆ. ಲಿಂಗರಾಜರ ದೂರದೃಷ್ಟಿತ್ವವನ್ನು ಎಲ್ಲರೂ ಅರ್ಥ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅಭಿನವ ಚನ್ನಬಸವ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ರಾಜ್ಯಾಧ್ಯಕ್ಷ ಶಿವಕುಮಾರಗೌಡ ಪಾಟೀಲ, ನವೀನ ಗುಳಗಣ್ಣವರ ಮಾತನಾಡಿದರು. ಎಂ.ಜಿ. ಗಚ್ಚನ್ನವರ ಲಿಂಗರಾಜರ ಉಪನ್ಯಾಸ ನೀಡಿದರು. ಬಸನಗೌಡ ಲಕ್ಕನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವೀರಪ್ಪ ಬಿಸನಳ್ಳಿ, ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಗೊಜನೂರ, ಶರಣಪ್ಪ ಜುಟ್ಲದ, ಭೀಮಣ್ಣ ಅಣಗೌಡ್ರ, ಬಸವರಾಜ ಕಳಕೊಣ್ಣವರ, ಪ್ರಕಾಶ ಸೂಡಿ, ಬಸವರಾಜ ಗಂಗರಗೊಂಡ, ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಇತರರಿದ್ದರು. ಭೂದಾನಿಗಳಾದ ತಳ್ಳಿಹಾಳಮಠ ದಂಪತಿಯನ್ನು ಸನ್ಮಾನಿಸಲಾಯಿತು. ಎಸ್.ಸಿ. ಗುಳಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್. ಕಳಕಣ್ಣವರ, ಆನಂದ ಲಕ್ಕನಗೌಡ್ರ ನಿರ್ವಹಿಸಿದರು.