ಕುಳಗೇರಿ ಕ್ರಾಸ್ ಸಮೀಪದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ ಜಯಂತಿ ಆಚರಿಸಲಾಯಿತು. ಚೆನ್ನಬಸಪ್ಪ ಕಂಠಿ, ಶಾಂತಲಿಂಗ ಸ್ವಾಮಿಜಿ, ಚಂದ್ರಶೇಖರ ದಂಡಿನ, ವೀರಯ್ಯ ಸಾಲಿಮಠ ಇತರರಿದ್ದರು. 
ಜಿಲ್ಲೆ

ಲಿಂಗರಾಜರ ವಿಚಾರಧಾರೆಗಳು ಸಾರ್ವಕಾಲಿಕ ಪ್ರಸ್ತುತ

Vijayapura - Desk - Gurappa Lokuri

ಕುಳಗೇರಿಕ್ರಾಸ್: ಸಿರಸಂಗಿ ಲಿಂಗರಾಜರ ವಿಚಾರಧಾರೆಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ ಎಂದು ಚೆನ್ನಬಸಪ್ಪ ಕಂಠಿ ಬಣ್ಣಿಸಿದರು.

ಭೈರನಹಟ್ಟಿಯ ಶ್ರೀ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕವನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಿದ ಮಹಾನ್ ಪುರುಷರು ತ್ಯಾಗವೀರ ಸಿರಸಂಗಿ ಲಿಂಗರಾಜರು. ದೇಶದ ಬೆನ್ನೆಲುಬು ಎಂದರೆ ರೈತ ಎಂಬುವುದನ್ನು ಮನಗಂಡಿದ್ದ ಸಿರಸಂಗಿ ಲಿಂಗರಾಜರು 150 ಎಕರೆ ಹೊಲ ಖರೀದಿಸಿ ಅಲ್ಲಿ ಕೃಷಿ ತರಬೇತಿ ಶಾಲೆ ಸ್ಥಾಪಿಸಿ ರೈತರಿಗೆ ಕೃಷಿಯ ಕುರಿತು ಮಾಹಿತಿ ಒದಗಿಸಿ ಜತೆಗೆ ಭವ್ಯ ಕೆರೆಗಳನ್ನು ಕಟ್ಟಿಸಿದ್ದರು. ಸಾಮಾಜಿಕ ಕ್ರಾಂತಿಕಾರಿಗಳಾದ ಇವರು ಬಾಲ್ಯವಿವಾಹಗಳನ್ನು ವಿರೋಧಿಸಿದ್ದರು ಎಂದರು.

ಭೈರನಹಟ್ಟಿ- ಶಿರೋಳ ಮಠದ ಶಾಂತಲಿಂಗ ಶ್ರೀಗಳು ಕನ್ನಡ ನಾಡಿಗೆ ಮತ್ತು ಲಿಂಗಾಯತ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ ಲಿಂಗರಾಜರು ಧರ್ಮ ಒಂದುಗೂಡಿಸುವ ಕೆಲಸ ಮಾಡಿದರು. ಸಮಾಜದಲ್ಲಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಆಸ್ತಿಯನ್ನೇ ಮಾರಾಟ ಮಾಡಿದ ಪರೋಪಕಾರಿ ತ್ಯಾಗಮಯಿ ಲಿಂಗರಾಜರ ಆಡಳಿತ ವಿಶ್ವದ ಎಲ್ಲಾ ಆಡಳಿತಗಾರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಮುಖಂಡರಾದ ಚಂದ್ರಶೇಖರ ದಂಡಿನ, ನಿವೃತ್ತ ಮುಖ್ಯಶಿಕ್ಷಕ ವೀರಯ್ಯ ಸಾಲಿಮಠ, ಬಿ.ಸಿ. ಐನಾಪುರ, ಮಹಾಂತೇಶ ಹಿರೇಮಠ ಮತ್ತಿತರರಿದ್ದರು.