ಮಳವಳ್ಳಿ: ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ, ಕೈಂಕರ್ಯಗಳು ನೆರವೇರುವುದರ ಜತೆಗೆ ಸಹಸ್ರಾರು ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.
ಪಟ್ಟಣದ ಕೋಟೆ ಬೀದಿಯಲ್ಲಿರುವ ಹೊಯ್ಸಳರ ಕಾಲದ ಸಾರಂಗಪಾಣಿ ವಿಷ್ಣು ದೇವಸ್ಥಾನ ಹಾಗೂ ಹೊರವಲಯದ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ಪೂಜಾ ವಿಧಿವಿಧಾನಗಳನ್ನು ಅರ್ಚಕರು ನಡೆಸಿದರು. ನಂತರ ಮೂಲ ದೇವರ ಮೂರ್ತಿಗಳಿಗೆ ಬೆಣ್ಣೆ ಮತ್ತು ವಿವಿಧ ಹೂಗಳಿಂದ ಅಲಂಕಾರಗೊಳಿಸಿ ಮಹಾ ಮಂಗಳಾರತಿ ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ತಾಲೂಕಿನ ಪೂರಿಗಾಲಿ ಪಾತಾಳೇಶ್ವರ, ಬೆಳಕವಾಡಿ ಕಾಶಿವಿಶ್ವನಾಥ, ಕಿರುಗಾವಲು ಸಮೀಪದ ಒಡ್ಗಲ್ ರಂಗನಾಥ, ಯತ್ತಂಬಾಡಿ ಕಾಳೇಶ್ವರ, ತೆಂಕಹಳ್ಳಿ ಶನೈಶ್ಚರ, ಮುತ್ತತ್ತಿ ಆಂಜನೇಯ, ನೆಲ್ಲಿಗೆರೆ, ದುಗ್ಗನಹಳ್ಳಿ, ರಾಗಿಬೊಮ್ಮನಹಳ್ಳಿ ಗ್ರಾಮಗಳಲ್ಲಿರುವ ಮಹದೇಶ್ವರ, ಗೌಡಗೆರೆ ಹಾಗೂ ಬಸನ ಬೆಟ್ಟ ಮತ್ತು ನಡಕಲಪುರ ಗ್ರಾಮಗಳ ಬಸವೇಶ್ವರ ದೇವಸ್ಥಾನಗಳಲ್ಲಿ ಧನುರ್ಮಾಸ ಹಾಗೂ ವೈಕುಂಠ ಏಕಾದಶಿ ಪೂಜಾ ಕಾರ್ಯಗಳು ನೆರವೇರಿದವು. ಎಲ್ಲ ದೇವಾಲಯಗಳಿಗೂ ಭಕ್ತಸಮೂಹ ತೆರಳಿ ಪೂಜೆ ಸಲ್ಲಿಸಿ ಭಕ್ತ ಸಮರ್ಪಿಸಿದರು.