ಜಿಲ್ಲೆ

ಲೈನ್‌ಮಾನ್‌ಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ದಿನದ 24 ಗಂಟೆಯೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಮಲೆನಾಡಿನ ಲೈನ್‌ಮ್ಯಾನ್‌ಗಳು ದೇಶದ ಗಡಿ ಕಾಯುವ ಯೋಧರಂತೆ ಕೆಲಸ ಮಾಡುತ್ತಾರೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷ್‌ತ್ ಆಶ್ರಯದಲ್ಲಿ ಮೆಸ್ಕಾಂ ಕಚೇರಿ ಆವರಣದಲ್ಲಿ ಲೈನ್‌ಮ್ಯಾನ್‌ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯುತ್ ಕೆಲಸ ಮಾಡುವ ಲೈನ್ ಮ್ಯಾನ್‌ಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಸಾಪದಿಂದ ಮೊದಲ ಬಾರಿಗೆ ಉತ್ತಮ ಲೈನ್‌ಮ್ಯಾನ್‌ಗಳನ್ನು ಅಭಿನಂದಿಸಿ ಸನ್ಮಾನಿಸಲಾಗಿದೆ. ಲೈನ್‌ಮ್ಯಾನ್‌ಗಳು ಹಗಲು, ರಾತ್ರಿ ಕೆಲಸ ಮಾಡಿ ಎಲ್ಲರಿಗೂ ಬೆಳಕು ನೀಡುತ್ತಾರೆ. ಮಲೆನಾಡಿನಲ್ಲಿ ಮಳೆ,ಗಾಳಿ ಅರ್ಭಟದ ನಡುವೆಯೂ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಹರ್ಷ ಮಾತನಾಡಿ, ಎಲ್ಲರಿಗೂ ಬೆಳಕು ನೀಡುವ ಮೆಸ್ಕಾಂ ಸಿಬ್ಬಂದಿ ತೆರೆಯ ಹಿಂದೆ ಕೆಲಸ ಮಾಡುತ್ತಾರೆ. ಮಲೆನಾಡು ಭಾಗದಲ್ಲಿ ವಿಪರೀತ ಮಳೆ, ಗಾಳಿ ಇರುವುದರಿಂದ ದಿನದ 24ಗಂಟೆಯೂ ಕೆಲಸ ಮಾಡಬೇಕಾಗುತ್ತದೆ. ಲೈನ್‌ಮ್ಯಾನ್‌ಗಳನ್ನು ಸನ್ಮಾನಿಸಿರುವುದರಿಂದ ಅವರು ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗಲಿದೆ ಎಂದರು.

ಲೈನ್‌ಮ್ಯಾನ್‌ಗಳಾದ ಸೋಮಲಿಂಗ, ಎಸ್.ಆರ್.ಶಿವರಾಜ, ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಮೆಸ್ಕಾಂ ಸಹಾಯಕ ಇಂಜಿನಿಯರ್ ಗೌತಮ್, ಸುರೇಶ್, ನಾಗಲಾಪುರ ಗ್ರಾಪಂ ಸದಸ್ಯ ಕೆ.ಗಂಗಾಧರ್, ಕಸಾಪ ಕಾರ್ಯದರ್ಶಿ ನಂದಿನಿ ಆಲಂದೂರು ಇದ್ದರು.