ಜಿಲ್ಲೆ

ಪ್ರಾಣ ಪಣಕ್ಕಿಟ್ಟು ವಿದ್ಯುತ್​ ಸಂಪರ್ಕ ಸರಿಪಡಿಸಿದ ಲೈನ್​ಮೆನ್​!; ಮಾಜಿ ಶಾಸಕರಿಗಾಗಿ ರಿಸ್ಕ್ ತಗೊಂಡ್ರಾ?

ರಾಯಚೂರು: ರಾಯಚೂರು ವಿದ್ಯುತ್ ಕಂಪನಿಯ ಸಿಬ್ಬಂದಿಯೊಬ್ಬರು ಪ್ರಾಣವನ್ನೇ ಪಣಕ್ಕಿಟ್ಟು ವಿದ್ಯುತ್ ಲೈನ್ ಸರಿಪಡಿಸಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಮತ್ತೊಂದೆಡೆ ಇವರು ಮಾಜಿ ಶಾಸಕರಿಗಾಗಿ ಇಂಥದ್ದೊಂದು ರಿಸ್ಕ್​ ತೆಗೆದುಕೊಂಡರಾ ಎಂದು ಪ್ರಶ್ನೆ ಮೂಡಿದ್ದು, ಮಾಜಿ ಎಂಎಲ್​ಎ ಬಗ್ಗೆ ಸಣ್ಣ ಆಕ್ಷೇಪವೂ ವ್ಯಕ್ತವಾಗಿದೆ.

ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಒಂದು ವಾರದಿಂದ ಮಳೆ ಸುರಿಯುತ್ತಿತ್ತು. ಅದರಿಂದಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಜಮೀನಿನಲ್ಲಿ ಹಲವು ಅಡಿಗಳ ಎತ್ತರದವರೆಗೂ ನೀರು ನಿಂತಿತ್ತು. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಹೀಗಾಗಿ ಅವರು ಅವರು ಜೆಸ್ಕಾಂಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಸ್ಥಳಕ್ಕೆ ಬಂದ ಜೆಸ್ಕಾಂ ಸಿಬ್ಬಂದಿ ದುರುಗಪ್ಪ ಮತ್ತು ಶಾಂತೇಶ್, ನೀರಿನಲ್ಲೇ ನಡೆದುಕೊಂಡು ಹೋಗಿ ವಿದ್ಯುತ್ ಲೈನ್ ಸರಿಪಡಿಸಿದ್ದಾರೆ. ಒಂದು ವೇಳೆ ನೀರಿನಲ್ಲಿ ವಿದ್ಯುತ್ ಹರಿದಿದ್ದರೆ ಇವರು ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಈ ಲೈನ್‌ಮನ್‌ಗಳ ಕಾರ್ಯ ಇದೀಗ ಎಲ್ಲೆಡೆ ಪ್ರಶಂಸೆಗೆ ಒಳಗಾಗಿದೆ. ಆದರೆ ಮಾಜಿ ಶಾಸಕರು ಇಂತಹ ದುಸ್ಸಾಹಸದ ಕೆಲಸವನ್ನು ಲೈನ್‌ಮನ್‌ಗಳಿಂದ ಮಾಡಿಸಬಾರದಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ.