ಮಹಮ್ಮದ್ ಅರ್ಷದ್ ಅಲಿ 
ಜಿಲ್ಲೆ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು

ರವಿಕುಮಾರ್ ಪಿ. ಕೆ

ಮಳವಳ್ಳಿ: ತಾಲೂಕಿನ ರೊಟ್ಟಿಕಟ್ಟೆ ಸಮೀಪದ ಮಳವಳ್ಳಿ-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಶುಕ್ರವಾರ ವಿದ್ಯುತ್ ಲೈನ್ ದುರಸ್ತಿ ಕಾರ್ಯ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸೆಸ್ಕ್ ಲೈನ್‌ಮನ್ ಮೃತಪಟ್ಟಿದ್ದಾರೆ.

ತಾಲೂಕಿನ ಶಿವನಸಮುದ್ರ (ಬ್ಲಫ್) ಗ್ರಾಮದ ಮಹಮ್ಮದ್ ಅರ್ಷದ್ ಅಲಿ (28) ಮೃತ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹಾದು ಹೋಗಿರುವ 11ಕೆವಿ ಮಾರ್ಗ ಓವರ್ ಲೋಡ್‌ನಿಂದಾಗಿ ಪದೇ ಪದೆ ವಿದ್ಯುತ್ ಕಡಿತಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸೂಚನೆಯಂತೆ ಅರ್ಷದ್ ಸೇರಿದಂತೆ ಮೂವರು ಲೈನ್‌ಮನ್‌ಗಳು ದುರಸ್ತಿ ಕಾರ್ಯಕ್ಕೆ ತೆರಳಿದ್ದರು. ಬಿ.ಜಿ.ಪುರ ಗ್ರಾಮದಲ್ಲಿರುವ ಉಪ ವಿಭಾಗದ ವಿದ್ಯುತ್ ಪ್ರಸರಣ ಕೇಂದ್ರದಿಂದ ಎಲ್‌ಸಿ (ಲೈನ್ ಕ್ಲಿಯರೆನ್ಸ್)ಪಡೆದುಕೊಂಡು ಮಹಮ್ಮದ್ ಅರ್ಷದ್ ಅಲಿ ಮತ್ತು ಸುರೇಶ್ ಕಂಬ ಏರಿದ್ದರು. ಲೈನ್ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಸುರೇಶ್ ಮೊದಲು ಕೆಳಗಿಳಿದಿದ್ದು, ಅರ್ಷದ್ ಅಲಿ ಕಂಬದಿಂದ ಕೆಳಗೆ ಇಳಿಯಲು ಮುಂದಾಗುತ್ತಿದ್ದಾಗ ದಿಢೀರ್ ವಿದ್ಯುತ್ ಪ್ರವಹಿಸಿದ ಪರಿಣಾಮ ಕಂಬದ ಮೇಲೆ ಮೃತಪಟ್ಟಿದ್ದಾರೆ.

ಕೂಡಲೇ ಕೆಳಗಿದ್ದ ಲೈನ್‌ಮನ್‌ಗಳು ವಿದ್ಯುತ್ ಕಡಿತಗೊಂಡಿರುವುದನ್ನು ಖಚಿತಪಡಿಸಿಕೊಂಡು ಸ್ಥಳೀಯರ ಸಹಕಾರದಿಂದ ಅರ್ಷದ್ ಮೃತ ದೇಹವನ್ನು ಕಂಬದಿಂದ ಕೆಳಗಿಳಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಮಹಮದ್ ಅರ್ಷದ್ ಅಲಿ ಕಳೆದ ವರ್ಷವಷ್ಟೇ ವಿವಾಹವಾಗಿದ್ದು ಒಂದು ವರ್ಷದ ಹೆಣ್ಣು ಮಗವಿದೆ. ಪಟ್ಟಣದ ಆಸ್ಪತ್ರೆಯ ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯಿಂದ ಉಪ ವಿಭಾಗದ ಲೈನ್‌ಮನ್‌ಗಳು ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆ ಎದುರು ಜಮಾಯಿಸಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದ ಲೈನ್‌ಮನ್ ಮೃತಪಟ್ಟಿದ್ದಾನೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.