ಜಿಲ್ಲೆ

ಲೈನ್ ಮನೆ ಆದಿವಾಸಿಗಳಿಗೆ ನಿವೇಶನ ನೀಡಿ

Mysuru - Desk - Yashavanth Kumar N

ಗೋಣಿಕೊಪ್ಪ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ದಲಿತ್ ರೈಟ್ಸ್ ಮೂವ್‌ಮೆಂಟ್ ವತಿಯಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಸಂಚಾಲಕ ರಮೇಶ್ ಮಾಯಮುಡಿ ಮಾತನಾಡಿ, ಭೂಮಾಲೀಕರ ಲೈನ್‌ಮನೆಯಲ್ಲಿ ಹಲವು ದಶಕಗಳಿಂದ ಆದಿವಾಸಿಗಳು ಜೀವನ ಸಾಗಿಸುತ್ತಿದ್ದಾರೆ. ಆದರೆ ಇಲ್ಲಿ ತನಕ ಸರ್ಕಾರ ಕನಿಷ್ಠ ನಿವೇಶನ ನೀಡುವಲ್ಲಿ ವಿಫಲವಾಗಿದೆ. ಇದರಿಂದ ಆದಿವಾಸಿಗಳು ಇನ್ನೂ ಕೂಡ ಸ್ವಂತ ಸೂರನ್ನು ಹೊಂದಲು ಸಾಧ್ಯವಾಗಿಲ್ಲ. ಕಳೆದ 18 ವರ್ಷಗಳಿಂದ ನಮ್ಮ ಸಂಘಟನೆ ವತಿಯಿಂದ ನಿರಂತರ ಹೋರಾಟ ನಡೆಸಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಅಕ್ರಮವಾಗಿ ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ವಾಪಸ್ ಪಡೆಯಲು ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು. ಭೂಮಿ ಉಳ್ಳವರಿಗೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಸರ್ಕಾರದ ಕ್ರಮವನ್ನು ನಮ್ಮ ಸಂಘಟನೆ ಖಂಡಿಸುತ್ತದೆ ಎಂದರು.

ಲೈನ್ ಮನೆಯಲ್ಲಿ ವಾಸವಿರುವ ಆದಿವಾಸಿಗಳಿಗೆ ಎರಡು ತಿಂಗಳೊಳಗೆ ನಿವೇಶನ ಮಂಜೂರು ಮಾಡಬೇಕು. ಸರ್ಕಾರಿ ಕಚೇರಿಗೆ ತೆರಳುವ ದಲಿತರಿಗೆ ಅಧಿಕಾರಿಗಳು ಗೌರವ ನೀಡಬೇಕು. ಜಿಪಂ ಸಿಇಒ, ತಾಪಂ ಇಒ ಹೆಸರಿನಲ್ಲಿರುವ ಸರ್ಕಾರಿ ಭೂಮಿಗಳನ್ನು ನಿವೇಶನವಾಗಿ ಪರಿವರ್ತಿಸಿ ನಿವೇಶನರಹಿತರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರದಿಂದ ಮಂಜೂರಾಗುವ ಯೋಜನೆಗಳು ದಲಿತರಿಗೆ ನೇರವಾಗಿ ಲಭಿಸುತ್ತಿಲ್ಲ. ದಲಿತರು ಸರ್ಕಾರಿ ಕಚೇರಿಗೆ ತೆರಳಿದ ವೇಳೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಅನವಶ್ಯಕವಾಗಿ ಕಚೇರಿಗೆ ಅಲೆದಾಡಿಸಲಾಗುತ್ತಿದೆ. ಸೂಕ್ತ ದಾಖಲಾತಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿದ ಪೊನ್ನಂಪೇಟೆ ತಾಪಂ ಇಒ ಕೆ.ಸಿ.ಅಪ್ಪಣ್ಣ ಮಾತನಾಡಿ, ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ನಿವೇಶನ ನೀಡಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಹಂತಹಂತವಾಗಿ ನಿವೇಶನ ಮಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಜೆ.ಎಂ.ಅಶೋಕ್, ಪಿ.ಕೆ.ಗೌರಿ, ಪಿ.ಬಿ.ಕರ್ಕು, ಜೆ.ಟಿ.ತಿಮ್ಮ ಬಿ.ರಾಣ, ಸೀತೆ ಸೇರದಂತೆ ತಾಲೂಕಿನ ವಿವಿಧೆಡೆ ಲೈನ್ ಮನೆಯಲ್ಲಿ ವಾಸವಿರುವ ಆದಿವಾಸಿಗಳು ಭಾಗವಹಿಸಿದ್ದರು.