ಕಾರವಾರ: ಡಿಸೆಂಬರ್ 31 ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಅಡುಗೆ ಅನಿಲ ಸಿಲಿಂಡರ್ ರದ್ದಾಗುತ್ತದೆ ಎಂಬ ನಕಲಿ ವಾಟ್ಸ್ ಆ್ಯಪ್ ಸಂದೇಶಗಳನ್ನು ನಂಬಿ ಜನ ಏಜೆನ್ಸಿಗಳ ಎದುರು ದಿನವಿಡೀ ಕಾದು ಹೈರಾಣಾಗುತ್ತಿದ್ದಾರೆ.
ಕಾರವಾರದ ಹಬ್ಬುವಾಡದದ ಭಾರತ ಗ್ಯಾಸ್‌ನ ಒಂದು ಹಾಗೂ ಎಚ್‌ಪಿಯ ಎರಡು ಏಜೆನ್ಸಿ ಕಚೇರಿಗಳ ಎದುರು ಎರಡು ದಿನಗಳಿಂದಲೇ ಸರದಿ ಸಾಲಿತ್ತು. ಮಂಗಳವಾರ ಗ್ರಾಹಕರ ಜನರ ಸರದಿ ಕಿಮೀಗಟ್ಟಲೇ ಮುಟ್ಟಿತ್ತು. ಜನತಾ ಬಝಾರ್‌ನಲ್ಲೂ ಇದೇ ಪರಿಸ್ಥಿತಿ ಇತ್ತು. ಇದು ಕಾರವಾರಕ್ಕೆ ಮಾತ್ರ ಸೀಮಿತವಾಗಿರದೇ ಜಿಲ್ಲೆಯ ಇತರ ಭಾಗಗಳಲ್ಲೂ ಇದೇ ಪರಿಸ್ಥಿತಿ ಇದೆ.
ಮಾಧ್ಯಮಗಳಲ್ಲಿ ಸಾಕಷ್ಟು ಸ್ಪಷ್ಟನೆಗಳ ನಂತರವೂ ಜನ ಬೆಳಗ್ಗೆ 4 ಗಂಟೆಗೆಲ್ಲ ಬಂದು ಗ್ಯಾಸ್ ಏಜೆನ್ಸಿಗಳ ಎದುರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ನಡೆಯಲಾಗದ ವೃದ್ಧರನ್ನು ಏಜೆನ್ಸಿ ಕಚೇರಿಗೆ ಕರೆತಂದು ಇ ಕೆವೈಸಿ ಮಾಡಿಸಲಾಗುತ್ತಿದೆ. ಜನ ಇ ಕೆವೈಸಿಗಾಗಿ ಐದಾರು ತಾಸು ಕಾಯಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಜನಜಂಗುಳಿ ಉಂಟಾಗುತ್ತಿದ್ದು, ಶಹರ ಹಾಗೂ ಸಂಚಾರ ಠಾಣೆಗಳ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಗೊಂದಲ:
ಮೃತರು, ನಕಲಿ ಗ್ರಾಹಕರನ್ನು ಪತ್ತೆ ಹಚ್ಚಲು ಗ್ರಾಹಕರ ಇ-ಕೆವೈಸಿ ಮಾಡಿಸುವಂತೆ ಕೇಂದ್ರ ಸರ್ಕಾರ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ನೀಡಿದ್ದು ನಿಜ. ಭಾರತ ಪೆಟ್ರೋಲಿಯಂ ಕಂಪನಿ (ಬಿಪಿಸಿಎಲ್) ಡಿಸೆಂಬರ್ 31 ರೊಳಗೆ ಈ ಕಾರ್ಯ ಮಾಡಿಸಬೇಕು ಎಂದು ತಮ್ಮ ಏಜೆನ್ಸಿಗಳಿಗೆ ಆಂತರಿಕ ಗಡುವು ನೀಡಿದೆ. ಆದರೆ, ಇತರ ಏಜೆನ್ಸಿಗಳಿಗೆ ಅಂಥ ಯಾವುದೇ ಕಾಲ ಮಿತಿ ನೀಡಿಲ್ಲ. ಇದರಿಂದ ಗೊಂದಲ ಉಂಟಾಗಿದೆ.
ಅಡುಗೆ ಅನಿಲ ಸಿಲಿಂಡರ್ ಇ-ಕೆವೈಸಿ ಮಾಡಿಸಬೇಕು ಆದರೆ, ಅದಕ್ಕೆ ಡಿಸೆಂಬರ್ 31 ಕೊನೆಯ ದಿನವಲ್ಲ. ಹಾಗಾಗಿ ಗ್ರಾಹಕರು ಮೊಬೈಲ್ ಸಂದೇಶಗಳನ್ನು ನಂಬಿ ಗೊಂದಲಕ್ಕೆ ಒಳಗಾಗಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣಕರ್ ತಿಳಿಸಿದ್ದಾರೆ.
ಜಿಲ್ಲೆಯ ಗ್ಯಾಸ್ ಏಜೆನ್ಸಿಗಳ ನೋಡಲ್ ಸೇಲ್ಸ್ ಆಫೀಸರ್ ಅಭಿನವ ಕುಮಾರ್ ಅವರ ಜತೆ ಚರ್ಚಿಸಿದ್ದು, ಡಿಸೆಂಬರ್ 31 ಕೊನೆಯ ದಿನವಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೆ, ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಏಜೆನ್ಸಿಗಳ ಎದುರು ಸಾಲು ನಿಲ್ಲುವುದನ್ನು ತಪ್ಪಿಸಲು ಮನೆಗಳಿಗೆ ಗ್ಯಾಸ್ ಪೂರೈಕೆಯ ವೇಳೆಯೇ ಇ ಕೆವೈಸಿ ಮಾಡಿಸಲು ಏಜೆನ್ಸಿಗಳಿಗೆ ಸೂಚಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ; ಶರವೇಗದಲ್ಲಿ ಓಡಿದ ವಂದೇ ಭಾರತ ರೈಲು
ಡಿಸೆಂಬರ್ 31 ರೊಳಗೆ ಗ್ರಾಹಕರ ಇ ಕೆವೈಸಿ ಮಾಡಿಸಬೇಕು ಎಂಬ ಸೂಚನೆ ನಮ್ಮ ಕಂಪನಿಯಿಂದ ಆಂತರಿಕ ಸೂಚನೆ ಬಂದಿದೆ. ಆದರೆ, ಮಾಡಿಸದಿದ್ದರೆ ಏನಾಗುವುದು ಎಂಬ ಸ್ಪಷ್ಟತೆ ಇಲ್ಲ. ನಾವು ಯಾವುದೇ ಗ್ರಾಹಕರಿಗೆ ಸಂದೇಶ ಕಳಿಸಿ, ಅಥವಾ ಕರೆ ಮಾಡಿ ಇ-ಕೆವೈಸಿ ಮಾಸುವಂತೆ ಹೇಳಿಲ್ಲ. ಆದರೆ, ಅವರೇ ಬೆಳಗಿನಜಾವದಿಂದ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ನಾವು ಕಚೇರಿಯ ಎಲ್ಲ ಸಿಬ್ಬಂದಿಯನ್ನು ಇದೇ ಕಾರ್ಯಕ್ಕೆ ನಿಯೋಜಿಸಿ ದಿನಕ್ಕೆ 600 ರಿಂದ 1 ಸಾವಿರದವರೆಗೂ ಇ-ಕೆವೈಸಿ ಮಾಡಿಸುತ್ತಿದ್ದೇವೆ. ವೃದ್ಧರಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಹಾಸಿಗೆಯಿಂದ ಏಳಲಾಗದಿದ್ದವರ ಮನೆಗಳಿಗೆ ಸ್ವತಃ ಹೋಗುತ್ತಿದ್ದೇವೆ. ನೆಟ್ವರ್ಕ್ ಸಮಸ್ಯೆಯಿಂದ ಎಲ್ಲ ಗ್ರಾಹಕರ ಮನೆಗಳಿಗೆ ತೆರಳಿ ಇ-ಕೆವೈಸಿ ಮಾಡುವುದು ಸಾಧ್ಯವಿಲ್ಲ.ವಿಜಯಕುಮಾರ ನಾಯ್ಕವೆಂಕಟೇಶ್ವರ ಗ್ಯಾಸ್ ಏಜೆನ್ಸಿ ಮಾಲೀಕ