ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಎಡಪದವಿನಲ್ಲಿ ಸರಣಿ ಅಪಘಾತ  
ಜಿಲ್ಲೆ

ಎಡಪದವಿನಲ್ಲಿ ಸರಣಿ ಅಪಘಾತ : ಮಣ್ಣು ಸಾಗಾಟದ ಲಾರಿಯ ಅವಾಂತರ

ವಿಜಯವಾಣಿ ಸುದ್ದಿಜಾಲ ಗುರುಪುರ

ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಎಡಪದವಿನಲ್ಲಿ ಕೆಂಪು ಕಲ್ಲು- ಮಣ್ಣು ತುಂಬಿದ್ದ ಲಾರಿಯೊಂದು ಟ್ಯಾಂಕರ್, ಬಸ್, ಟೆಂಪೋ, ಮೂರು ದ್ವಿಚಕ್ರ ವಾಹನ ಸಹಿತ ಒಟ್ಟು 7 ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಅಪರಾಹ್ನ ನಡೆದಿದ್ದು,ಮೂವರಿಗೆ ಗಂಭೀರ ಗಾಯವಾಗಿದೆ.

ಮಣ್ಣು ತುಂಬಿದ್ದ ಆಂಧ್ರ ಮೂಲದ ಲಾರಿ ಗಂಜಿಮಠ ಮಾರ್ಗವಾಗಿ ಮೂಡುಬಿದಿರೆಗೆ ಸಾಗುತ್ತಿದ್ದಾಗ ಬ್ರೇಕ್ ಫೇಲಾಗಿ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಎಡಪದವು ರಾಮ ಮಂದಿರದ ಬಳಿ ರಸ್ತೆ ಬದಿ ಂತಿದ್ದ ಟ್ಯಾಂಕರ್‌ಗೆ ಡಿಕ್ಕಿಯಾದ ಪರಿಣಾಮ ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ. ಬಳಿಕ ರಸ್ತೆ ಪಕ್ಕದಲ್ಲಿರುವ ಕಟ್ಟಡ ಮತ್ತು ಎಟಿಎಂಗೆ ಡಿಕ್ಕಿಯಾಗಿ, ಮಂಗಳೂರಿನತ್ತ ಸಾಗುತ್ತಿದ್ದ ಅಡುಗೆ ಎಣ್ಣೆ ತುಂಬಿದ್ದ ಟೆಂಪೋ, ಮೂಡುಬಿದಿರೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್, ಒಂದು ಕಾರು ಮತ್ತು ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಇಷ್ಟೆಲ್ಲ ಅವಾಂತರ ಸೃಷ್ಟಿಸಿದ ಲಾರಿ ಬಳಿಕ ಎಡಪದವು ಜಂಕ್ಷನ್‌ನಲ್ಲಿ ಚರಂಡಿಗೆ ವಾಲಿಕೊಂಡು ನಿಂತಿದೆ. ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಟ್ಯಾಂಕರ್ ಚಾಲಕನ ಸಹಿತ ಮೂವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಟೆಂಪೋದಲ್ಲಿದ್ದ ಅಡುಗೆ ಎಣ್ಣೆ ಪ್ಯಾಕೇಟ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಲಾರಿ ಗುದ್ದಿದ ಕಟ್ಟಡದಲ್ಲಿರುವ ಅಗರಿ ಶೋ ರೂಮ್ ಮತ್ತು ಎಟಿಎಂ ಜಖಂಗೊಂಡಿವೆ. ಅಪಘಾತ ಸಂಭವಿಸುತ್ತಲೇ ಸ್ಥಳದಲ್ಲಿ ಭಾರಿ ಸಂಖ್ಯೆಯ ಜನರು ಜಮಾಯಿಸಿದ್ದು, ಸ್ಥಳಕ್ಕಾಗಮಿಸಿದ ಬಜ್ಪೆ ಠಾಣಾಧಿಕಾರಿ ನಂದೀಶ್ವರ ನೇತೃತ್ವದ ಪೊಲೀಸ್ ತಂಡ ಸ್ಥಳೀಯರ ನೆರವು ಮತ್ತು ಕ್ರೇನ್ ಬಳಸಿ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿದ್ದಾರೆ. ಈ ವೇಳೆ ಒಂದು ತಾಸು ಹೆದ್ದಾರಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಅನ್ಯ ಮಾರ್ಗಗಳ ಮೂಲಕ ಮಂಗಳೂರು ಮತ್ತು ಮೂಡುಬಿದಿರೆ ಕಡೆಗೆ ವಾಹನಗಳು ಸಾಗಿವೆ.

ಕೆಂಪು ಮಣ್ಣು ಅಕ್ರಮ ಸಾಗಾಟ

ಗಂಜಿಮಠ ಭಾಗದಿಂದ ಕೆಲವು ಸಮಯದಿಂದ ಕಲ್ಲಿನ ಕ್ವಾರಿಗಳಿಂದ ಆಂಧ್ರ ಪ್ರದೇಶದ ರಿಜಿಸ್ಟ್ರೇಶನ್ ಹೊಂದಿದ ಘನ ಲಾರಿಗಳಲ್ಲಿ ಕೆಂಪು ಮಣ್ಣು ಸಾಗಿಸಲಾಗುತ್ತಿದೆ. ಇವು ಹಳೆಯ ಲಾರಿಗಳಾಗಿದ್ದು, ಕೆಲವು ಸಮಯದ ಹಿಂದೆ ಗುರುಪುರದಲ್ಲಿ ಇಂತಹ ಮೂರು ಲಾರಿಗಳು ಪಲ್ಟಿಯಾಗಿವೆ. ಅಂದಿನ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು. ಮಣ್ಣು ತುಂಬಿದ್ದ ಆಂಧ್ರದ ಲಾರಿಯ 4ನೇ ಅಪಘಾತ ಇದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.