ತೀರ್ಥಹಳ್ಳಿ: ಮೂರು ದಶಕಗಳ ಹಿಂದೆ ಪಟ್ಟಣದ ಕುವೆಂಪು ವೃತ್ತದಲ್ಲಿ ನಿರ್ಮಾಣಗೊಂಡಿದ್ದ ಗುರುಭವನ ಸದ್ಯ ಶಿಥಿಲಾವಸ್ಥೆಗೆ ತಲುಪಿದ್ದು ಈ ಭವನದಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಹೊಸ ಭವನ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆದಿದೆ.
90ರ ದಶಕದಲ್ಲಿ ನಿರ್ಮಾಣಗೊಂಡಿದ್ದ ಗುರುಭವನವನ್ನು ಪಟ್ಟಣದ ಹೃದಯ ಭಾಗದ ವಾಣಿಜ್ಯ ಚಟುವಟಿಕೆ ಕೇಂದ್ರವಾದ ಕುವೆಂಪು ವೃತ್ತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಿಂದಿನ ಕಚೇರಿಗೆ ಹೊಂದಿಕೊಂಡು ನಿರ್ಮಿಸಲಾಗಿತ್ತು. ಆದರೆ ಆ ಸಂಧರ್ಭದಲ್ಲಿದ್ದ ತಾಲೂಕಿನ ಶಿಕ್ಷಕರ ಸಂಖ್ಯೆಗನುಗುಣವಾಗಿ ಸ್ಥಳಾವಕಾಶದ ಕೊರತೆ ಮತ್ತು ಸಭಾಂಗಣದ ಧ್ವನಿ ಮತ್ತಿತರ ತಾಂತ್ರಿಕ ಸಮಸ್ಯೆಗಳಿಂದಾಗಿ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಈ ಭವನ ಪೂರಕವಾಗಿರಲಿಲ್ಲ. ಹೀಗಾಗಿ ಕೆಲವು ವರ್ಷ ಈ ಭವನದಲ್ಲಿ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. 80*200 ಅಡಿ ನಿವೇಶನದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಬಸ್‌ಸ್ಟಾಪ್ ಪಕ್ಕದಲ್ಲಿರುವ ಈ ಕಟ್ಟಡಕ್ಕೆ ಪಾರ್ಕಿಂಗ್ ಸಮಸ್ಯೆಯೂ ಇದೆ. ಕಳೆದ ಐದು ವರ್ಷಗಳ ಹಿಂದೆ ಈ ಕಟ್ಟಡವನ್ನು ಖಾಸಗಿಯವರಿಗೆ ಬಾಡಿಗೆ ನೀಡಲಾಗಿದ್ದು ವರ್ಷಕ್ಕೆ 2.40 ಲಕ್ಷ ರೂ ಬಾಡಿಗೆ ಸಂಗ್ರಹವಾಗುತ್ತಿದೆ. ಈ ಭವನಕ್ಕೆ ಬಾಡಿಗೆ ರೂಪದಲ್ಲಿ ಬರುವ ಆದಾಯದಲ್ಲಿ ಪ್ರತಿ ವರ್ಷ ನಡೆಯುವ ಶಿಕ್ಷಕರ ದಿನಾಚರಣೆಗೆ ಸುಮಾರು 70 ಸಾವಿರ ರೂ. ವಂತಿಕೆ ನೀಡಲಾಗುತ್ತಿದೆ.
ಇದೇ ಸ್ಥಳದಲ್ಲಿ ಶಿಕ್ಷಕರ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಮತ್ತು ನಿರಂತರ ಆದಾಯವೂ ಬರುವಂತೆ ಆಧುನಿಕವಾಗಿ ಭವನವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ತಿಳಿಸಿದರು. ಪಟ್ಟಣದ ಕೋಳಿಕಾಲು ಗುಡ್ಡದಲ್ಲಿ ಗುರುಭವನಕ್ಕೆ ಕಾದಿರಿಸಲಾದ ವಿಶಾಲವಾದ ನಿವೇಶನ ಇರುವುದಾಗಿ ತಾಲೂಕು ಶಿಕ್ಷಕರ ಸಂಘದ ಗೌರವಾಧ್ಯಕ್ಷ ಮಹಾಬಲೇಶ್ವರ ಹೆಗ್ಡೆ ಹೇಳಿದರು.