ವಿಜಯವಾಣಿ ಸುದ್ದಿಜಾಲ ಉಳ್ಳಾಲ
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ನೇತ್ರ ವಿಜ್ಞಾನ ವಿಭಾಗದ ವತಿಯಿಂದ ಸೈಮ್ ಸೆಲ್ ಲ್ಯಾಬೊರೇಟರಿ ಸಹಯೋಗದಲ್ಲಿ ಕಾರ್ನಿಯಾ(ಕಣ್ಣಿನ ಪಾರದರ್ಶಕ ಪೊರೆ) ಹಾಳಾಗಿರುವ ರೋಗಿಗಳಿಗೆ ಲಿಂಬಲ್ ಸ್ಟೆಮ್ ಸೆಲ್ ಕಸಿ ಚಿಕಿತ್ಸೆ ಪ್ರಯೋಗ ಯಶಸ್ವಿಯಾಗಿದೆ.
ಹತ್ತು ಪ್ರಕರಣಗಳಲ್ಲಿ ಎರಡು ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಮೂರನೇ ಪ್ರಯೋಗಕ್ಕೆ ಸಿದ್ಧತೆ ನಡೆಸಲಾಗಿದೆ. ಈಗ ನಡೆದಿರುವ ಪ್ರಯೋಗಗಳ ಮೂಲಕ ಚಿಕಿತ್ಸೆ ಪಡೆದ ಇಬ್ಬರು ರೋಗಿಗಳು ತಮ್ಮ ದೃಷ್ಟಿ ಸಂಪೂರ್ಣವಾಗಿ ಮರಳಿ ಪಡೆದಿರುವುದಲ್ಲದೆ, ಕಣ್ಣಿನ ಸೌಂದರ್ಯದಲ್ಲೂ ಗಣನೀಯ ಸುಧಾರಣೆ ಕಂಡುಬಂದಿರುವುದು ಸಂಶೋಧನೆಯ ವಿಶೇಷ.
ಈ ಪ್ರಯೋಗಕ್ಕೆ ನಿಟ್ಟೆ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ.ಪ್ರವೀಣ್ ಕುಮಾರ್ ಶೆಟ್ಟಿ, ನೇತ್ರ ತಜ್ಞರಾದ ಡಾ.ವಿಜಯ್ ಪೈ ಮತ್ತು ಡಾ.ವೈಶಾಖ ಶೆಟ್ಟಿ ಅವರ ಸಹಕಾರ ಪಡೆದಿದ್ದು, ನವದೆಹಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬೆಂಬಲಧನ ಪಡೆದಿದ್ದಾರೆ. ಅನಿರಿಡಿಯಾ ಅಥವಾ ಸ್ವೀವನ್ಸ್-ಜಾನ್ಸನ್ ಸಿಂಡ್ರೋಮ್ ಎಂಬ ಆನುವಂಶಿಕ ಅಸ್ವಸ್ಥತೆಯಿಂದ ಅಥವಾ ಭೌತಿಕ ಮತ್ತು ರಾಸಾಯನಿಕ ಗಾಯಗಳಿಂದ ಕಾರ್ನಿಯಾ ಕಳೆದುಕೊಂಡ ರೋಗಿಗಳು ಚಿಕಿತ್ಸೆಗಾಗಿ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡವನ್ನು ಸಂಪರ್ಕಿಸಬಹುದು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ, ದಶಕದ ಹಿಂದೆ ಬ್ರಿಟನ್‌ನ ಕೆಂಟ್ ಕ್ಯಾಂಟರ್‌ಬರಿ ಕ್ರೈಸ್ಟ್‌ಚರ್ಚ್ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಕೊರಿಯಾದ ಸಿಯೋಲ್‌ನ ಕೆಥೋಲಿಕ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸ್ಟೆಮ್ ಸೆಲ್ ಲ್ಯಾಬ್ ಅನ್ನು ಪ್ರಾರಂಭಿಸಿದ ದೂರದೃಷ್ಟಿಯ ಫಲಿತಾಂಶ ಇದಾಗಿದೆ. ನಿಟ್ಟೆ ವಿಶ್ವವಿದ್ಯಾಲಯ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಮತ್ತು ವಿಶಾಲ್ ಹೆಗ್ಡೆ, ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಮತ್ತು ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂದೀಪ್ ರೈ ಈ ಕಾರ್ಯಕ್ಕೆ ಬೆಂಬಲ ನೀಡಿದ್ದಾರೆ.
ಧನಸಹಾಯ : ಈ ಚಿಕಿತ್ಸೆ ರೋಗಿಗೆ ಯಾವುದೇ ಆರ್ಥಿಕ ಹೊರೆ ಉಂಟುಮಾಡದೆ ದೃಷ್ಟಿಯನ್ನು ಸಂಪೂರ್ಣವಾಗಿ ಮರಳಿ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಜತೆಗೆ ಸಂಶೋಧನಾ ತಂಡ ವಯಸ್ಕ ಮೆಸೆನ್‌ಕೈಮಲ್ ಸೈಮ್ ಸೆಲ್‌ಗಳನ್ನು ಲಿಂಬಲ್ ಸ್ಟೆಮ್ ಸೆಲ್‌ಗಳು ಮತ್ತು ಎಂಡೋಥೀಲಿಯಲ್ ಸೆಲ್‌ಗಳಾಗಿ ಯಶಸ್ವಿಯಾಗಿ ಪರಿವರ್ತಿಸಿದೆ. ಈ ಸಂಶೋಧನೆಗೆ ಐಸಿಎಂಆರ್ ಮತ್ತು ನಿಟ್ಟೆ ವಿಶ್ವವಿದ್ಯಾಲಯದಿಂದ ಧನಸಹಾಯ ನೀಡಲಾಗುತ್ತಿದೆ.