ಜಿಲ್ಲೆ

ಶೂದ್ರರಂತೆ ಇಡೀ ಮಹಿಳಾ ಕುಲವನ್ನೂ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗಿತ್ತು: CM Siddaramaiah

ಮೈಸೂರು: ಶೂದ್ರರಂತೆ ಇಡೀ ಮಹಿಳಾ ಕುಲವನ್ನೂ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗಿತ್ತು. ಈಗ ಹೆಣ್ಣು ಮಕ್ಕಳೇ ಶಿಕ್ಷಣದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಹೇಳಿದರು.

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯಕ್ರಮಗಳನ್ನು, ಗ್ಯಾರಂಟಿಗಳನ್ನು ನಾವು ಜಾರಿಗೆ ತಂದಿದ್ದೇವೆ ಎಂದ ಮುಖ್ಯಮಂತ್ರಿಗಳು, ನೀವು ವಿದ್ಯಾರ್ಥಿನಿಯರು ಬಸ್​ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದೀರಿ ತಾನೇ ಎಂದು ಪ್ರಶ್ನಿಸಿದರು. ವಿದ್ಯಾರ್ಥಿನಿಯರು ಹೌದೂ ಎಂದು ಎರಡೂ ಕೈಗಳನ್ನು ಎತ್ತಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

ಇಲ್ಲಿಯವರೆಗೂ 325 ಕೋಟಿ ರೂ. ಫ್ರೀ ಟಿಕೆಟ್ ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಮಹಿಳೆಯರು, ಯುವತಿಯರು ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಲು ಸಾಧ್ಯ ಎಂದರು.

ಮಹಿಳೆಯರಿಗೆ ಮೊದಲಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದು ಬಸವಣ್ಣನರಾದರೆ, ಶಿಕ್ಷಣ ಮಹಿಳೆಯರ ಹಕ್ಕಾಗಿಸಿದ್ದು ಡಾ.ಬಿ.ಆರ್.ಅಂಬೇಡ್ಕರ್. ಆದ್ದರಿಂದ, ನೀವೆಲ್ಲಾ ಜಾತ್ಯತೀತರಾಗಿ, ವಿಶ್ವ ಮಾನವರಾಗಿ ಬೆಳೆದು ವೈಚಾರಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿ, ಶಿಕ್ಷಣ ಕಲಿತೂ ಜಾತಿವಾದಿಗಳಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪ, ಎಂ.ಸಿ.ಸುಧಾಕರ್, ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ, ಡಾ.ತಿಮ್ಮಯ್ಯ, ಯತೀಂದ್ರ ಸಿದ್ದರಾಮಯ್ಯ ಸೇರಿ ಇತರರಿದ್ದರು.