ಗುರುಗುಂಟಾ: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದದಿಂದ ಆಚರಿಸಬೇಕು ಎಂದು ಹಟ್ಟಿಚಿನ್ನದಗಣಿ ಠಾಣೆ ಪಿಐ ಹೊಸಕೇರಪ್ಪ ಹೇಳಿದರು.
ಸ್ಥಳೀಯ ಠಾಣೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಸರ್ಕಾರ ಡಿಜೆ ನಿಷೇಧಿಸಿದ್ದು, ಬಳಸಬಾರದು.
ದರ್ಶನಕ್ಕಾಗಿ ಬರುವ ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ದ್ವಾರ ಮಾರ್ಗ ನಿರ್ಮಿಸಬೇಕು. ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಮಾಡುವ ಮಾರ್ಗಗಳ ಮಾಹಿತಿಯನ್ನು ಪ್ರತಿಷ್ಠಾಪನಾ ಮಂಡಳಿಯವರು ಮುಂಚಿತವಾಗಿ ಪೊಲೀಸರಿಗೆ ತಿಳಿಸಿ, ಅನುಮತಿ ಪಡೆಯಬೇಕು. ವಿಸರ್ಜನಾ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಬೆಳಕಿನ ವ್ಯವಸ್ಥೆ ಮತ್ತು ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು.
ನಾಡಕಚೇರಿ ತಹಸೀಲ್ದಾರ್ ರಾಘವೇಂದ್ರ ಕೊಪ್ಪದ, ಜೆಸ್ಕಾಂ ಸೆಕ್ಷನ್ ಅಧಿಕಾರಿ ನಾಗಪ್ಪ, ಗ್ರಾಪಂ ಸಿಬ್ಬಂದಿ ಮೌಲಾಸಾಬ್, ಪೈದೊಡ್ಡಿ ಗ್ರಾಪಂ ಅಧ್ಯಕ್ಷ ಬಸಣ್ಣ ಮಂಗ್ಯಾಳ, ಎಎಸ್‌ಐ ರಮೇಶ, ಮುಖ್ಯಪೇದೆ ಪ್ರಭುಗೌಡ, ಪ್ರಮುಖರಾದ ಸೋಮನಾಥ ನಾಯಕ, ಗಣೇಶ ರತ್ನಗಿರಿ, ಸಿದ್ದಪ್ಪ ಬೆಂಚಲದೊಡ್ಡಿ, ಬಾಬುನಾಯಕ ಎಚ್.ಜಿ.ಎಂ., ಶಿವು ನರಸಿಂಹ ನಾಯಕ, ಹುಲುಗಪ್ಪ, ಅಂಬುನಾಯಕ, ಗುರು ಅರನೂರ, ನಾಗರಾಜ ಗಜ, ಕೃಷ್ಣ, ನಬೀಸಾಬ್ ಚೋಪದಾರ್, ಪ್ರಭು ಪೈದೊಡ್ಡಿ, ಮೌಲಾಸಾಬ್, ಪ್ರಭುಗೌಡ ಇತರರಿದ್ದರು.