ಜಿಲ್ಲೆ

ಬೆಳಕಿನ ಯೋಜನೆಗೆ 2 ವರ್ಷದಿಂದ ಗ್ರಹಣ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾದಿಂದ ಮುಖ್ಯ ಬಜಾರ್ ರಸ್ತೆವರೆಗೆ ಎಲ್‌ಇಡಿ ವಿದ್ಯುತ್ ಕಂಬಗಳ 8.80 ಲಕ್ಷ ರೂ. ಮೊತ್ತದ ಕಾಮಗಾರಿ ಅರೆಬರೆ ಆಗಿದ್ದು, ರಾತ್ರಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

ರಾಮಣ್ಣ ಲಮಾಣಿ ಶಾಸಕರಾಗಿದ್ದಾಗ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನ್ಸಿಪಾಲಟಿ) ಯೋಜನೆ ಹಂತ 4ರಡಿ 1 ಕೋಟಿ ರೂ. ವೆಚ್ಚದ ಶಿಗ್ಲಿ ಕ್ರಾಸ್‌ನಿಂದ 300 ಮೀಟರ್ ಸಿಸಿ ರಸ್ತೆ ಮತ್ತು ರಸ್ತೆ ಬದಿ 18 ಎಲ್‌ಇಡಿ ವಿದ್ಯುತ್ ಕಂಬ ಅಳವಡಿಸುವ ಕಾಮಗಾರಿಯನ್ನು ಕೊಪ್ಪಳ ಜಿಲ್ಲೆಯವರೊಬ್ಬರು ಗುತ್ತಿಗೆ ಪಡೆದಿದ್ದರು. ನಿಧಾನಗತಿಯ ಕಾಮಗಾರಿಯೊಂದಿಗೆ ಸಿಸಿ ರಸ್ತೆ, ರಸ್ತೆ ಇಕ್ಕೆಲಗಳಲ್ಲಿ ಪೇವರ್ಸ್‌ ಅಳವಡಿಸುವುದು ಮತ್ತು 18 ಎಲ್‌ಇಡಿ ವಿದ್ಯುತ್ ಕಂಬ ಅಳವಡಿಕೆಗೆ ಪಿಲ್ಲರ್ ಮಾತ್ರ ನಿರ್ಮಿಸಿ ಕೈತೊಳೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಟೆಂಡರ್ ಮೊತ್ತವೂ ಪಾವತಿಯಾಗಿದ್ದರಿಂದ 2 ವರ್ಷ ಕಳೆದರೂ ಕಂಬವೂ ಇಲ್ಲ, ಬೆಳಕೂ ಇಲ್ಲದ ಸ್ಥಿತಿ ಮುಖ್ಯ ಬಜಾರ್‌ನಲ್ಲಿದೆ.

ರಸ್ತೆ ಕಾಮಗಾರಿ ಗುಣಮಟ್ಟದ್ದಾಗಿಲ್ಲ. ರಸ್ತೆ ಬದಿ ಅಳವಡಿಸಿರುವ ಪೇವರ್ಸ್‌ ಮೂರೇ ತಿಂಗಳಿಗೆ ಕಿತ್ತು ಬಂದಿವೆ. ಅಲ್ಲಲ್ಲಿ ನೀರು ನಿಲ್ಲುತ್ತದೆ. ಪಿಲ್ಲರ್‌ನಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳೂ ಹಾಳಾಗಿವೆ. ಆದಾಗ್ಯೂ ಥರ್ಡ್, ಪೋರ್ಥ್ ಪಾರ್ಟಿಗಳಿಂದ ಪರಿಶೀಲನೆಯೂ ಆಗಿ ಬಿಲ್ ಆಗಿದ್ದರಿಂದ ಗುತ್ತಿಗೆದಾರ ಯಾರ ಮಾತಿಗೂ ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರನ್ನು ಪ್ರಶ್ನಿಸಲಾಗಿ ನಗರೋತ್ಥಾನ ಕಾಮಗಾರಿಗಳು ಜಿಲ್ಲಾ ಹಂತದಲ್ಲಿಯೇ ದೂರದ ಪ್ರಭಾವಿಗಳಿಗೆ ಟೆಂಡರ್ ಆಗುತ್ತವೆ ಮತ್ತು ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗುತ್ತವೆ. ಇದರಿಂದ ಗುತ್ತಿಗೆದಾರರು ನಮ್ಮ ಮಾತು ಕೇಳುವುದೇ ಇಲ್ಲ ಎಂಬ ಅಸಮಾಧಾನದ ಮಾತು ಹೇಳುತ್ತಾರೆ.